ಹೊಸದಿಗಂತ ಮಡಿಕೇರಿ:
ಕೊಡಗು ಜಿಲ್ಲೆಯ ಗಡಿಭಾಗವಾದ ಕೊಡ್ಲಿಪೇಟೆಯಲ್ಲಿ ಮಂಗಳವಾರ ರಾತ್ರಿ ಭೀಕರ ಘಟನೆಯೊಂದು ನಡೆದಿದ್ದು, ಲಾರಿಯಿಂದ ಕಾರಿಗೆ ಡಿಕ್ಕಿಪಡಿಸಿ ವ್ಯಕ್ತಿಯೊಬ್ಬರ ಕೊಲೆಗೆ ಯತ್ನಿಸಿರುವ ಆರೋಪ ಕೇಳಿಬಂದಿದೆ.
ಘಟನೆಯಲ್ಲಿ ಕೊಡ್ಲಿಪೇಟೆಯ ಹ್ಯಾಂಡ್‌ಪೋಸ್ಟ್‌ನಲ್ಲಿರುವ ಎಸ್ಸಾರ್ ಪೆಟ್ರೋಲ್ ಬಂಕ್ ಮಾಲಕ ಹಾಗೂ ಕೊಡ್ಲಿಪೇಟೆ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕರೂ ಆದ ಜೆ.ಕೆ.ತೇಜಕುಮಾರ್ ಅವರು ಪ್ರಾಣಾಪಾಯದಿಂದ ಪಾರಾಗಿದ್ದು, ಕಾಲಿಗೆ ಗಾಯಗಳಾಗಿವೆ.
ಘಟನೆ ವಿವರ:
ಮಂಗಳವಾರ ರಾತ್ರಿ ತೇಜಕುಮಾರ್ ಅವರು ದೊಡ್ಡಕುಂದ ಗ್ರಾಮದ ಕಿರಿಕೊಡ್ಲಿ ರಸ್ತೆಯಲ್ಲಿ ತಮ್ಮ ಮನೆಗೆ ಕಾರಿನಲ್ಲಿ ತೆರಳುತ್ತಿದ್ದಾಗ ಈ ಘಟನೆ ನಡೆದಿದೆ. ಹಿಂದಿನಿಂದ ವೇಗವಾಗಿ ಬಂದ ಲಾರಿಯು ಅವರ ಕಾರಿಗೆ ಡಿಕ್ಕಿ ಹೊಡೆದಿದೆ. ಗುದ್ದಿದ ರಭಸಕ್ಕೆ ಕಾರು ದಿಕ್ಕು ಬದಲಿಸಿ ನಿಂತರೂ, ದುಷ್ಕರ್ಮಿಗಳು ಮತ್ತೆ ಲಾರಿಯನ್ನು ಹಿಂದೆ ತೆಗೆದುಕೊಂಡು ಪುನಃ ಹಿಂಬದಿಯಿಂದ ಡಿಕ್ಕಿಪಡಿಸಲು ಪ್ರಯತ್ನಿಸಿದ್ದಾರೆ.
ಈ ವೇಳೆ, ಅದೇ ರಸ್ತೆಯಲ್ಲಿ ಬರುತ್ತಿದ್ದ ನೀರುಗುಂದ ಗ್ರಾಮದ ಇಬ್ಬರು ಬೈಕ್ ಸವಾರರ ಮೇಲೆ ಲಾರಿ ಹತ್ತಿದೆ. ಅದೃಷ್ಟವಶಾತ್ ಬೈಕ್ ಸವಾರರು ಕೆಳಗೆ ಜಿಗಿದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆದರೆ ಬೈಕ್ ಲಾರಿಯಡಿಯಲ್ಲಿ ಸಿಲುಕಿಕೊಂಡಿದೆ. ಇದರಿಂದಾಗಿ ಲಾರಿಯು ರಸ್ತೆ ಬದಿಯ ಗುಂಡಿಗೆ ಇಳಿದು ಮುಂದೆ-ಹಿಂದೆ ಚಲಿಸಲಾಗದೆ ಸಿಲುಕಿಕೊಂಡಿದೆ. ತಕ್ಷಣವೇ ಲಾರಿ ಚಾಲಕ ಮತ್ತು ಅದರಲ್ಲಿದ್ದ ಮತ್ತೊಬ್ಬ ವ್ಯಕ್ತಿ ಸ್ಥಳದಿಂದ ಪರಾರಿಯಾಗಿದ್ದಾರೆ.
ಏರ್‌ಬ್ಯಾಗ್‌ನಿಂದ ಜೀವ ಉಳಿದಿದೆ: ಲಾರಿ ಡಿಕ್ಕಿಯ ತೀವ್ರತೆಗೆ ತೇಜಕುಮಾರ್ ಅವರ ಕಾರಿನ ಏರ್ ಬ್ಯಾಗ್ ಸ್ವಯಂಚಾಲಿತವಾಗಿ ತೆರೆದುಕೊಂಡ ಪರಿಣಾಮವಾಗಿ ಅವರು ದೊಡ್ಡ ಅಪಾಯದಿಂದ ಪಾರಾಗಿದ್ದಾರೆ. ಘಟನೆಯಿಂದ ಅವರ ಕಾಲಿಗೆ ಗಾಯಗಳಾಗಿವೆ.
ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಪೊಲೀಸರಿಗೆ, ಲಾರಿಯು ಕೆರಗನಹಳ್ಳಿ ಗ್ರಾಮದ ಕೆ.ಆರ್.ರಮೇಶ್ ಎಂಬವರಿಗೆ ಸೇರಿದ್ದೆಂದು ತಿಳಿದುಬಂದಿದೆ.
ವೈಯಕ್ತಿಕ ದ್ವೇಷವೇ ಕೃತ್ಯಕ್ಕೆ ಕಾರಣ ಎಂದು ತೇಜಕುಮಾರ್ ಅವರು ಹೇಳಿಕೆ ನೀಡಿದ್ದು, ಈ ಕೃತ್ಯದಲ್ಲಿ ರಮೇಶ್ ಮತ್ತು ಜೆಸಿಬಿ ದಿವಾಕರ್ ಅವರ ಪಾತ್ರವಿದೆ ಎಂದು ಆರೋಪಿಸಿದ್ದಾರೆ. ಈ ಸಂಬಂಧ ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆಗಾಗಿ ಪೊಲೀಸರು ಶೋಧ ಕಾರ್ಯವನ್ನು ಮುಂದುವರಿಸಿದ್ದಾರೆ.