Monday, October 20, 2025

‘ನಗರ’ ತೊರೆದ ‘ನಾಗರಿಕರು’: ದೀಪಾವಳಿ ಎಫೆಕ್ಟ್, ಬೆಂಗಳೂರಿಗೆ ಈಗ ‘ಸ್ವಲ್ಪ ವಿಶ್ರಾಂತಿ’!

ಹೊಸದಿಗಂತ ಡಿಜಿಟಲ್ ಡೆಸ್ಕ್:

ದೀಪಾವಳಿ ಹಬ್ಬದ ಸಂಭ್ರಮದ ಕಾರಣ, ಕಳೆದ ನಾಲ್ಕು ದಿನಗಳಿಂದ ಪ್ರಯಾಣಿಕರಿಂದ ತುಂಬಿ ತುಳುಕುತ್ತಿದ್ದ ಮೆಜೆಸ್ಟಿಕ್‌ನ ಕೆಂಪೇಗೌಡ ಬಸ್ ನಿಲ್ದಾಣ ಇದೀಗ ಖಾಲಿ ಖಾಲಿಯಾಗಿದೆ. ಹಬ್ಬದ ಪ್ರಯುಕ್ತ ಶುಕ್ರವಾರ, ಶನಿವಾರ ಮತ್ತು ಭಾನುವಾರದಂದು ಬೆಂಗಳೂರಿನಿಂದ ತಮ್ಮ ತಮ್ಮ ಜಿಲ್ಲೆ ಮತ್ತು ರಾಜ್ಯಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಪ್ರಯಾಣ ಬೆಳೆಸಿದ್ದರು.

ಕಳೆದ ಕೆಲವು ದಿನಗಳಿಂದ ಬೆಂಗಳೂರಿನಿಂದ ಹೊರಡುವ ಬಹುತೇಕ ಎಲ್ಲಾ ಬಸ್‌ಗಳು ಸಂಪೂರ್ಣ ಭರ್ತಿಯಾಗಿದ್ದವು. ಬುಧವಾರವೇ ದೀಪಾವಳಿ ಹಬ್ಬ ಬಂದಿದ್ದರಿಂದ, ಸರ್ಕಾರಿ ಮತ್ತು ಖಾಸಗಿ ಉದ್ಯೋಗಿಗಳು ರಜೆಯ ಅನುಕೂಲಕ್ಕಾಗಿ ಶನಿವಾರವೇ ಹೆಚ್ಚಿನ ಸಂಖ್ಯೆಯಲ್ಲಿ ಊರುಗಳತ್ತ ತೆರಳಿದ್ದರು. ಇದರ ಪರಿಣಾಮವಾಗಿ, ಇಂದು ಬಸ್ಸುಗಳಲ್ಲಿ ಓಡಾಡುವ ಪ್ರಯಾಣಿಕರ ಸಂಖ್ಯೆ ಗಣನೀಯವಾಗಿ ಇಳಿಕೆಯಾಗಿದೆ.

ಪ್ರಯಾಣಿಕರ ಸಂಖ್ಯೆ ಇಳಿಮುಖವಾಗಿರುವುದರಿಂದ ಹಾಸನಾಂಬೆ ದರ್ಶನಕ್ಕೆ ಬೆಂಗಳೂರಿನಿಂದ ತೆರಳುವ ಭಕ್ತರ ಸಂಖ್ಯೆಯೂ ಕಡಿಮೆಯಾಗಿದೆ ಎಂದು ವರದಿಯಾಗಿದೆ.

ಟ್ರಾಫಿಕ್ ಜಾಮ್ ಎಚ್ಚರಿಕೆ:

ಈ ವಾರದ ರಜೆ ಮುಗಿಸಿ, ಊರಿಗೆ ತೆರಳಿದ್ದ ಪ್ರಯಾಣಿಕರು ಬಹುತೇಕರು ಈ ಶನಿವಾರ ಸಂಜೆ ಮತ್ತು ಭಾನುವಾರದಂದು ಬೆಂಗಳೂರಿಗೆ ಮರಳಿ ಬರುವ ನಿರೀಕ್ಷೆಯಿದೆ. ಇದರ ಪರಿಣಾಮವಾಗಿ, ಬೆಂಗಳೂರು ಪ್ರವೇಶಿಸುವ ಪ್ರಮುಖ ಮಾರ್ಗಗಳಾದ ಗೊರಗುಂಟೆಪಾಳ್ಯ ಸಿಗ್ನಲ್, ಎಲೆಕ್ಟ್ರಾನಿಕ್ ಸಿಟಿ ಸೇರಿದಂತೆ ಹಲವು ಕಡೆಗಳಲ್ಲಿ ಭಾರಿ ಟ್ರಾಫಿಕ್ ಜಾಮ್ ಉಂಟಾಗುವ ಸಾಧ್ಯತೆ ಇದೆ. ನಗರಕ್ಕೆ ಮರಳಿ ಬರುವ ಪ್ರಯಾಣಿಕರು ಮತ್ತು ವಾಹನ ಸವಾರರು ಈ ಬಗ್ಗೆ ಎಚ್ಚರ ವಹಿಸುವುದು ಉತ್ತಮ.

error: Content is protected !!