ಹೊಸದಿಗಂತ ಡಿಜಿಟಲ್ ಡೆಸ್ಕ್:
ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಯನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಬುಧವಾರ ಹೇಳಿದ್ದಾರೆ.
ಬುಧವಾರ ಕೋಲ್ಕತ್ತಾದಲ್ಲಿ ಮೆಗಾ ಸಮಾವೇಶದಲ್ಲಿ ಮಾತನಾಡಿದ ಅಮಿತ್ ಶಾ, ಮಮತಾ ಬ್ಯಾನರ್ಜಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವನ್ನಯ ತರಾಟೆಗೆ ತೆಗೆದುಕೊಂಡಿದ್ದಾರೆ. ಮಮತಾ ಬ್ಯಾನರ್ಜಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು “ತುಷ್ಟೀಕರಣ ರಾಜಕೀಯ” ದಲ್ಲಿ ತೊಡಗಿದೆ . ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸರ್ಕಾರವನ್ನು ಅಧಿಕಾರಕ್ಕೆ ತರಲು ಜನರು ಶ್ರಮಿಸಬೇಕು ಎಂದು ಒತ್ತಾಯಿಸಿದ್ದಾರೆ.
ಸಿಎಎ ದೇಶದ ಕಾನೂನು ಮತ್ತು ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಯಾವುದೇ ಬೆಲೆ ತೆತ್ತಾದರೂ ಅದನ್ನು ಜಾರಿಗೆ ತರಲಿದೆ. ‘ಪೌರತ್ವ (ತಿದ್ದುಪಡಿ) ಕಾಯ್ದೆ ದೇಶದ ಕಾನೂನು, ಅದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಮತ್ತು ನಾವು ಅದನ್ನು ಜಾರಿಗೆ ತರುತ್ತೇವೆ’ ಎಂದಿದ್ದಾರೆ.
2019ರ ಪೌರತ್ವ (ತಿದ್ದುಪಡಿ) ಕಾಯಿದೆ, 2014ರ ಡಿಸೆಂಬರ್ 31ರಂದು ಅಥವಾ ಅದಕ್ಕೂ ಮೊದಲು ಭಾರತವನ್ನು ಪ್ರವೇಶಿಸಿದ ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನದ ಹಿಂದೂ, ಸಿಖ್, ಬೌದ್ಧ, ಜೈನ್, ಪಾರ್ಸಿ ಅಥವಾ ಕ್ರಿಶ್ಚಿಯನ್ ಸಮುದಾಯಗಳಿಗೆ ಸೇರಿದ ವಲಸಿಗರಿಗೆ ಪೌರತ್ವವನ್ನು ನೀಡಲು ಅನುಕೂಲವಾಗುವಂತೆ ಮಾಡುತ್ತದೆ. ಪೌರತ್ವ (ತಿದ್ದುಪಡಿ) ಕಾಯಿದೆ, 2019 ಅನ್ನು ಡಿಸೆಂಬರ್ 12 ರಂದು ಅಧಿಸೂಚಿಸಲಾಯಿತು ಮತ್ತು 2020 ರಲ್ಲಿ ಜನವರಿ 10 ರಂದು ಜಾರಿಗೆ ಬಂದಿತು.
2020 ರಲ್ಲಿ ಸಂಸತ್ತಿನಲ್ಲಿ ಈ ಕಾಯ್ದೆಗೆ ಅಂಗೀಕಾರ ನೀಡಲಾಗಿದೆ. ಸಿಎಎ ಮುಸ್ಲಿಮರನ್ನು ಹೊರತುಪಡಿಸುತ್ತದೆ ಮತ್ತು ಜಾತ್ಯತೀತ ರಾಷ್ಟ್ರದ ನಂಬಿಕೆಗೆ ಪೌರತ್ವವನ್ನು ಲಿಂಕ್ ಮಾಡುತ್ತದೆ ಎಂದು ಹೇಳುವ ಅಸಂವಿಧಾನಿಕ ಎಂದು ತೃಣಮೂಲ ಕಾಂಗ್ರೆಸ್ (TMC) ಇದಕ್ಕೆ ವಿರೋಧ ವ್ಯಕ್ತಪಡಿಸಿದೆ. ಸಿಎಎಗೆ ಕಾನೂನು ರೂಪಿಸುವ ಪ್ರಕ್ರಿಯೆಯಲ್ಲಿದೆ ಎಂದು ಕೇಂದ್ರವು ಈ ಹಿಂದೆ ಹೇಳಿತ್ತು. ಭಾನುವಾರ, ಕೇಂದ್ರ ಗೃಹ ವ್ಯವಹಾರಗಳ ರಾಜ್ಯ ಸಚಿವ ಅಜಯ್ ಕುಮಾರ್ ಮಿಶ್ರಾ ಅವರು ಸಿಎಎಗೆ ನಿಯಮಗಳನ್ನು ಮಾರ್ಚ್ 30, 2024 ರೊಳಗೆ ರೂಪಿಸಲಾಗುವುದು ಎಂದು ಹೇಳಿದ್ದಾರೆ.
ಪೌರತ್ವ (ತಿದ್ದುಪಡಿ) ಕಾಯ್ದೆಯ ಅಂತಿಮ ಕರಡು 2024ರ ಮಾರ್ಚ್ 30 ರೊಳಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ ಎಂದು ಕೇಂದ್ರ ಸಚಿವ ಅಜಯ್ ಮಿಶ್ರಾ ಕಳೆದ ಭಾನುವಾರ ಹೇಳಿದ್ದಾರೆ. ಅದರೊಂದಿಗೆ ಕೇಂದ್ರ ಸರ್ಕಾರ ಕೂಡ ಸಿಎಎ ಜಾರಿಗೆ ಈಗಾಗಲೇ ಕೆಲಸ ಆರಂಭ ಮಾಡಿದ್ದು ಸ್ಪಷ್ಟವಾಗಿದೆ.