ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಾನ್ಫಿಡೆಂಟ್ ಗ್ರೂಪ್ ಮುಖ್ಯಸ್ಥ CJ Roy ಆತ್ಮಹತ್ಯೆ ಪ್ರಕರಣದ ತನಿಖೆ ಇದೀಗ ಅಂತಿಮ ಹಂತ ತಲುಪಿದ್ದು, ವಿಶೇಷ ತನಿಖಾ ತಂಡ (SIT) ಮಹತ್ವದ ನಿರ್ಣಯಕ್ಕೆ ಬಂದಿದೆ. ಪ್ರಾಥಮಿಕ ಮತ್ತು ತಾಂತ್ರಿಕ ಸಾಕ್ಷ್ಯಾಧಾರಗಳ ಪರಿಶೀಲನೆಯ ಬಳಿಕ, ಮಾನಸಿಕ ಖಿನ್ನತೆಯೇ ಆತ್ಮಹತ್ಯೆಗೆ ಪ್ರಮುಖ ಕಾರಣವಾಗಿರಬಹುದು ಎಂದು ತನಿಖಾ ತಂಡ ತಿಳಿಸಿದೆ.
ಜನವರಿ 30ರಂದು ಬೆಂಗಳೂರಿನ ಲ್ಯಾಂಗ್ಫೋರ್ಡ್ ಟೌನ್ನಲ್ಲಿರುವ ಕಚೇರಿಯಲ್ಲಿ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ ಪ್ರಕರಣವು ರಾಜ್ಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿತ್ತು. ಆ ವೇಳೆ ಆದಾಯ ತೆರಿಗೆ ಅಧಿಕಾರಿಗಳ ವಿಚಾರಣೆ ನಡೆಯುತ್ತಿದ್ದ ಹಿನ್ನೆಲೆ, ಅವರ ಮೇಲಿನ ಒತ್ತಡವೇ ಈ ದುರಂತಕ್ಕೆ ಕಾರಣ ಎನ್ನುವ ಆರೋಪಗಳು ಕೇಳಿಬಂದಿದ್ದವು. ಇದೇ ಕಾರಣಕ್ಕೆ ರಾಜ್ಯ ಸರ್ಕಾರ ಪ್ರಕರಣವನ್ನು ಎಸ್ಐಟಿ ತನಿಖೆಗೆ ವಹಿಸಿತ್ತು.
ಇದನ್ನೂ ಓದಿ:
ತನಿಖೆಯ ವೇಳೆ ರಾಯ್ ಹಲವು ತಿಂಗಳುಗಳಿಂದ ಮಾನಸಿಕ ಖಿನ್ನತೆಯ ಚಿಕಿತ್ಸೆಯಲ್ಲಿ ಇದ್ದದ್ದು ಬೆಳಕಿಗೆ ಬಂದಿದೆ. ಆದರೆ, ಕೆಲವು ತಿಂಗಳಿನಿಂದ ಚಿಕಿತ್ಸೆ ಮತ್ತು ಔಷಧ ಸೇವನೆಯನ್ನು ನಿಲ್ಲಿಸಿದ್ದರೆಂದು ಎಸ್ಐಟಿ ಪತ್ತೆಹಚ್ಚಿದೆ. ಮೃತ್ಯುವಿನ ಮುನ್ನ ಒಂದು ತಿಂಗಳಿನಿಂದ ಮಾತ್ರೆಗಳನ್ನು ಸೇವಿಸದೇ ಇದ್ದದ್ದು ಪ್ರಕರಣದಲ್ಲಿ ಪ್ರಮುಖ ಅಂಶವಾಗಿ ಪರಿಗಣಿಸಲಾಗಿದೆ.
ಇನ್ನೊಂದೆಡೆ, ಆದಾಯ ತೆರಿಗೆ ಅಧಿಕಾರಿಗಳ ಕಿರುಕುಳ ಅಥವಾ ನೇರ ಒತ್ತಡಕ್ಕೆ ಸಂಬಂಧಿಸಿದ ಯಾವುದೇ ದೃಢವಾದ ಸಾಕ್ಷ್ಯ ಸಿಕ್ಕಿಲ್ಲವೆಂದು ಎಸ್ಐಟಿ ಸ್ಪಷ್ಟಪಡಿಸಿದೆ. ತನಿಖೆ ಬಹುತೇಕ ಪೂರ್ಣಗೊಂಡಿದ್ದು, ಶೀಘ್ರದಲ್ಲೇ ನ್ಯಾಯಾಲಯಕ್ಕೆ ಚಾರ್ಜ್ಶೀಟ್ ಸಲ್ಲಿಸುವ ಸಾಧ್ಯತೆ ಇದೆ.



