ಹೊಸದಿಗಂತ ಡಿಜಿಟಲ್ ಡೆಸ್ಕ್:
ನಂಜನಗೂಡಿನ ಶ್ರೀಕಂಠೇಶ್ವರ ದೇಗುಲದಲ್ಲಿ ನಡೆದ ಅಂಧಕಾಸುರ ವಧೆ ಹಾಗೂ ನಂಜುಂಡೇಶ್ವೆ ಉತ್ಸವದಲ್ಲಿ ಭಕ್ತರು ಹಾಗೂ ದಲಿತ ಸಂಘರ್ಷ ಸಮಿತಿ ನಡುವೆ ಘರ್ಷಣೆ ನಡೆದಿದೆ.
ಇಬ್ಬರು ಸದಸ್ಯರ ನಡುವೆ ನಡೆದ ಮಾತಿನ ಚಕಮಕಿ ಪೊಲೀಸರು ಬಂದು ನಿಲ್ಲಿಸುವ ಮಟ್ಟಿಗೆ ಬೆಳೆದಿದೆ. ಶ್ರೀಕಂಠೇಶ್ವರ ದೇಗುಲದಲ್ಲಿ ಪ್ರತಿವರ್ಷದಂತೆ ನಿನ್ನೆಯೂ ಸಾಂಪ್ರದಾಯಿಕ ಕಾರ್ಯಕ್ರಮ ನಡೆದಿತ್ತು.
ರಾಕ್ಷಸ ಮಂಟಪದಲ್ಲಿ ಬೃಹತ್ ರಂಗೋಲಿ ಹಾಗೂ ಮಹಿಷಾಸುರನ ಬೃಹದಾಕಾರದ ಬ್ಯಾನರ್ ಕಟ್ಟಲಾಗಿತ್ತು. ಮಹಿಷಾಸುರನ ರಂಗೋಲಿ ಸುತ್ತ ಉತ್ಸವ ಮೂರ್ತಿ ಮೆರವಣಿಗೆ ಹಾಕಿ ರಂಗೋಲಿ ಅಳಿಸಿ, ಬ್ಯಾನರ್ ಕಿತ್ತು ಮುಂದೆ ಹೋಗುವುದು ವಾಡಿಕೆ.
ಆದರೆ ಮಹಿಷನ ಚಿತ್ರ ಹಾಗೂ ಬ್ಯಾನರ್ಗೆ ದಲಿತ ಸಂಘರ್ಷ ಸಮಿತಿ ಆಕ್ಷೇಪ ವ್ಯಕ್ತಪಡಿಸಿತ್ತು. ಇದರಿಂದಾಗಿ ಮಾತಿನ ಚಕಮಕಿ ಆರಂಭವಾಗಿತ್ತು. ಮಹಿಷಾಸುರ ನಮ್ಮ ರಾಜ ಆತನ ಪೂಜಿಸುತ್ತೇವೆ. ಆತನ ರಂಗೋಲಿ ತುಳಿದು, ಬ್ಯಾನರ್ ಕೆಳಕ್ಕೆ ಹಾಕಿದರೆ ನಮಗೆ ಅವಮಾನ ಎಂದು ದಲಿತ ಸಂಘರ್ಷ ಸಮಿತಿ ಹೇಳಿದೆ.
ಪೊಲೀಸರು ಸ್ಥಳಕ್ಕೆ ಆಗಮಿಸಿ ಲಘು ಲಾಠಿ ಪ್ರಹಾರ ನಡೆಸಿದ ನಂತರ ಜನರು ಬೇರೆ ಬೇರೆಡೆ ತೆರಳಿದ್ದಾರೆ. ಸದ್ಯಕ್ಕೆ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದೆ.