ಹೊಸದಿಗಂತ ಡಿಜಿಟಲ್ ಡೆಸ್ಕ್:
4ನೇ ತರಗತಿಯ ವಿದ್ಯಾರ್ಥಿಗೆ (Student) ಆತನ ಮೂವರು ಸಹಪಾಠಿಗಳು ಕೈವಾರದಿಂದ 108 ಬಾರಿ ಚುಚ್ಚಿರುವ ಆಘಾತಕಾರಿ ಘಟನೆ ಮಧ್ಯಪ್ರದೇಶದ (Madhya Pradesh) ಇಂದೋರ್‌ನ ಖಾಸಗಿ ಶಾಲೆಯೊಂದರಲ್ಲಿ (School) ನಡೆದಿದೆ.
ಜಗಳದ ವೇಳೆ 4ನೇ ತರಗತಿಯ ವಿದ್ಯಾರ್ಥಿಯೊಬ್ಬನ ಮೇಲೆ ಆತನ ಮೂವರು ಸಹಪಾಠಿಗಳು ಜಾಮೆಟ್ರಿ ಕಂಪಾಸ್ನಿಂದ 108 ಬಾರಿ ಹಲ್ಲೆ ನಡೆಸಿದ್ದಾರೆ ಎಂದು ಅಧಿಕಾರಿಯೊಬ್ಬರು ಸೋಮವಾರ ತಿಳಿಸಿದ್ದಾರೆ.
ಘಟನೆಯ ಕುರಿತಂತೆ ಮಕ್ಕಳ ಕಲ್ಯಾಣ ಸಮಿತಿ (ಸಿಡಬ್ಲ್ಯೂಸಿ) ಪೊಲೀಸರಿಂದ ತನಿಖಾ ವರದಿ ಕೇಳಿದೆ ಎಂದು ಅಧಿಕಾರಿ ತಿಳಿಸಿದ್ದಾರೆ. ನವೆಂಬರ್ 24 ರಂದು ಏರೋಡ್ರೋಮ್ ಪೊಲೀಸ್ ಠಾಣಾ ವ್ಯಾಪ್ತಿಯ ಖಾಸಗಿ ಶಾಲೆಯಲ್ಲಿ ನಡೆದ ಜಗಳದ ವೇಳೆ ಈ ಘಟನೆ ನಡೆದಿದೆ ಎಂದು ಸಿಡಬ್ಲ್ಯೂಸಿ ಅಧ್ಯಕ್ಷೆ ಪಲ್ಲವಿ ಪೋರ್ವಾಲ್ ಹೇಳಿದ್ದಾರೆ.
‘ಪ್ರಕರಣ ಆಘಾತಕಾರಿಯಾಗಿದೆ. ಇಷ್ಟು ಚಿಕ್ಕ ವಯಸ್ಸಿನ ಮಕ್ಕಳ ಹಿಂಸಾತ್ಮಕ ವರ್ತನೆಗೆ ಕಾರಣವನ್ನು ಕಂಡುಹಿಡಿಯಲು ನಾವು ಪೊಲೀಸರಿಂದ ತನಿಖಾ ವರದಿ ಕೇಳಿದ್ದೇವೆ, ‘ಎಂದು ಅವರು ತಿಳಿಸಿದ್ದಾರೆ.
ನವೆಂಬರ್ 24 ರಂದು ಮಧ್ಯಾಹ್ನ 2 ಗಂಟೆ ಸುಮಾರಿಗೆ ಶಾಲೆಯಲ್ಲಿ ನಡೆದ ದಾಳಿಯಿಂದಾಗಿ ನನ್ನ ಮಗನಿಗೆ ಭೀತಿ ಉಂಟಾಗಿದೆ ಎಂದು ತಂದೆ ಆರೋಪಿಸಿದ್ದಾರೆ. ‘ನನ್ನ ಮಗ ಮನೆಗೆ ಹಿಂದಿರುಗಿದಾಗ ಈ ಬಗ್ಗೆ ತಿಳಿಸಿದ. ಅವನ ಸಹಪಾಠಿಗಳು ಏಕೆ ಹಿಂಸಾತ್ಮಕವಾಗಿ ನಡೆದುಕೊಂಡರು ಎಂದು ನನಗೆ ಇನ್ನೂ ತಿಳಿದಿಲ್ಲ. ಶಾಲೆಯ ಆಡಳಿತ ಮಂಡಳಿಯು ತರಗತಿಯ ಸಿಸಿಟಿವಿ ದೃಶ್ಯಾವಳಿಗಳನ್ನು ನೀಡುತ್ತಿಲ್ಲ’ ಎಂದು ಅವರು ಆಪಾದಿಸಿದ್ದಾರೆ. ಘಟನೆಯ ಬಗ್ಗೆ ಏರೋಡ್ರೋಮ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ ಎಂದೂ ಹೇಳಿದ್ದಾರೆ.