ಮುಖ್ಯಮಂತ್ರಿಗಳ ಒತ್ತಡಕ್ಕೆ ಮಣಿದು ಲೋಕಾಯುಕ್ತದಿಂದ ಕ್ಲೀನ್‌ ಚಿಟ್: ಬಿ.ವೈ.ವಿಜಯೇಂದ್ರ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮುಡಾ ವಿಚಾರದಲ್ಲಿ ಮುಖ್ಯಮಂತ್ರಿಗಳ ಒತ್ತಡಕ್ಕೆ ಮಣಿದು ಲೋಕಾಯುಕ್ತ ಕ್ಲೀನ್‌ ಚಿಟ್ ಕೊಟ್ಟಿರುವ ಸಾಧ್ಯತೆ ಇದೆ. ಕ್ಲೀನ್‌ ಚಿಟ್ ಕೊಟ್ಟಿದ್ದರೆ, ಇದರ ವಿರುದ್ಧ ನಾವು ಹೋರಾಟ ಮಾಡುತ್ತೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ತಿಳಿಸಿದ್ದಾರೆ.

ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಮಾಧ್ಯಮಗಳಲ್ಲಿ ವರದಿಯಾದಂತೆ ಲೋಕಾಯುಕ್ತ ತನಿಖಾ ಸಂಸ್ಥೆ ಮುಡಾ ಹಗರಣದಲ್ಲಿ ಮುಖ್ಯಮಂತ್ರಿಗಳಿಗೆ ಕ್ಲೀನ್‌ ಚಿಟ್ ಕೊಟ್ಟಿದ್ದೇ ಆದರೆ, ಲೋಕಾಯುಕ್ತ ತನಿಖೆ ಸರಿಯಾಗಿ ಆಗುತ್ತಿಲ್ಲ. ಸಿಎಂ ಒತ್ತಡಕ್ಕೆ ಮಣಿದಿದ್ದಾರೆ ಎಂದು ಬಿಜೆಪಿ ಹಲವು ದಿನಗಳಿಂದ ವ್ಯಕ್ತಪಡಿಸಿದ ಅನುಮಾನಗಳು ಸತ್ಯವಾದಂತೆ ಎಂದು ಹೇಳಿದರು.

ಮೊನ್ನೆ ಜಾರಿ ನಿರ್ದೇಶನಾಲಯವು (ಇ.ಡಿ.) ಪ್ರೆಸ್ ನೋಟನ್ನೂ ಬಿಡುಗಡೆ ಮಾಡಿದೆ. ಮುಡಾದಲ್ಲಿ ಎಷ್ಟು ಕೋಟಿ ಹಗರಣ ನಡೆದಿದೆ ಎಂಬುದನ್ನು ಮಾಧ್ಯಮಗಳಿಗೆ ತಿಳಿಸಿದ್ದಾರೆ. ಮತ್ತೊಂದು ಕಡೆ ರಾಜ್ಯ ಹೈಕೋರ್ಟ್ ಕೂಡ ಮೈಸೂರಿನ ಮುಡಾ ಹಗರಣವನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದೆ. ಇದರ ನಡುವೆ ಮುಖ್ಯಮಂತ್ರಿಗಳೂ ಸೇರಿ ರಾಜ್ಯ ಸರ್ಕಾರವು ಮಾನ್ಯ ರಾಜ್ಯಪಾಲರನ್ನು ಅವಹೇಳನಕಾರಿಯಾಗಿ ನಿಂದಿಸುವ ಪ್ರಯತ್ನ ಮಾಡಿದ್ದಾರೆ ಎಂದು ಆಕ್ಷೇಪಿಸಿದರು.

ಹೈಕೋರ್ಟ್ ತೀರ್ಪು ಬರುವ ಸಂದರ್ಭದಲ್ಲೇ ಲೋಕಾಯುಕ್ತ ವರದಿ ನೀಡಿದ್ದು ಸತ್ಯವಾದರೆ, ಇದು ಖಂಡಿತ ಸರಿಯಲ್ಲ. ಇದಕ್ಕೆ ಯಾವುದೇ ರೀತಿಯ ಪಾವಿತ್ರ‍್ಯತೆ ಇರುವುದಿಲ್ಲ ಎಂದು ತಿಳಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!