ರಾಜ್ಯದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಮುಕ್ತಾಯ: ಫಲಿತಾಂಶ ಕುರಿತು ಸಚಿವ ಬಿ.ಸಿ. ನಾಗೇಶ್ ಮಾಹಿತಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ರಾಜ್ಯದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಮುಕ್ತಾಯವಾಗಿದೆ. ಮೇ ಎರಡನೇ ವಾರದಲ್ಲಿ ಫಲಿತಾಂಶ ಪ್ರಕಟಿಸುವ ಗುರಿ ಹೊಂದಲಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ತಿಳಿಸಿದರು.
ವಿಜಯಪುರ ಜಿಲ್ಲೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾ.28ರಿಂದ ಆರಂಭವಾದ ಪರೀಕ್ಷೆ ಸುಸೂತ್ರವಾಗಿ ನಡೆದಿದೆ. ಒಂದು ಪರೀಕ್ಷಾ ಕೇಂದ್ರದಲ್ಲಿ ಮಾತ್ರ ಪರೀಕ್ಷಾ ಅಕ್ರಮ ವರದಿಯಾಗಿದೆ. ಈ ಸಂಬಂಧ ಒಬ್ಬ ವಿದ್ಯಾರ್ಥಿಯನ್ನು ಡಿಬಾರ್ ಮಾಡಲಾಗಿದೆ. ಮೊದಲ ಬಾರಿ ಪರೀಕ್ಷೆ ಬರೆಯುತ್ತಿರುವವರಲ್ಲಿ ಹಾಜರಾತಿ ಪ್ರಮಾಣ ಶೇ.98ಕ್ಕಿಂತ ಹೆಚ್ಚು ಇದೆ. ಖಾಸಗಿ ಅಭ್ಯರ್ಥಿಗಳು ಮತ್ತು ಪುನರಾವರ್ತಿತ ಅಭ್ಯರ್ಥಿಗಳ ಸಂಖ್ಯೆಯಲ್ಲಿ ಗೈರು ಹಾಜರಾತಿ ಪ್ರಮಾಣ ಎಂದಿನಂತೆ ಮುಂದುವರೆದಿದೆ ಎಂದರು.
ಏ.12ರಿಂದ ಕೀ ಉತ್ತರಗಳು, ಉತ್ತರಗಳಿಗೆ ಆಕ್ಷೇಪಣೆ ಕರೆಯುವುದು ಸೇರಿದಂತೆ ಇನ್ನಿತರ ಪ್ರಕ್ರಿಯೆಗಳು ಆರಂಭವಾಗುತ್ತವೆ. ಏಪ್ರಿಲ್ ಕೊನೆಯ ವಾರದಲ್ಲಿ ಮೌಲ್ಯಮಾಪನ ಪ್ರಕ್ರಿಯೆ ಆರಂಭವಾಗುತ್ತದೆ. ಮೇ ಎರಡನೇ ವಾರದಲ್ಲಿ ಫಲಿತಾಂಶ ಪ್ರಕಟಿಸಲಾಗುವುದು. ಜೂನ್ 4ನೇ ವಾರದಲ್ಲಿ ಪೂರಕ ಪರೀಕ್ಷೆ ನಡೆಯಲಿದೆ ಎಂದು ಮಾಹಿತಿ ನೀಡಿದರು.
ವಿದ್ಯಾರ್ಥಿಗಳು ಸಮವಸ್ತ್ರದಲ್ಲಿ ಹಾಜರಾಗಿ ಪರೀಕ್ಷೆ ಬರೆದಿದ್ದಾರೆ.
ಸಮವಸ್ತ್ರ ವಿಚಾರವಾಗಿ ಶಾಲೆಗಳಲ್ಲಿ ಯಾವುದೇ ಗೊಂದಲ ಉಂಟಾಗಿಲ್ಲ. ಅನಾರೋಗ್ಯ ಲಕ್ಷಣಗಳು ಕಂಡು ಬಂದರೆ ಅಂತಹ ವಿದ್ಯಾರ್ಥಿಗಳಿಗೆ ಪ್ರತ್ಯೇಕವಾಗಿ ಪರೀಕ್ಷೆ ಬರೆಯಲು ಕೊಠಡಿ ವ್ಯವಸ್ಥೆ ಕಲ್ಪಿಸಲಾಗಿತ್ತು. ಪರೀಕ್ಷೆಯ ಅವಧಿಯಲ್ಲಿ ಯಾವೊಬ್ಬ ವಿದ್ಯಾರ್ಥಿಗೂ ಕೋವಿಡ್ ಪಾಸಿಟಿವ್ ಬಂದಿಲ್ಲ ಎಂದು ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!