July 21, 2026
Tuesday, July 21, 2026
spot_img

ಡೆಹ್ರಾಡೂನ್​​ನಲ್ಲಿ ಮೇಘಸ್ಫೋಟ : ಕೊಚ್ಚಿ ಹೋದ ಮನೆಗಳು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಡೆಹ್ರಾಡೂನ್​​ನಲ್ಲಿ ಇಂದು ಬೆಳಗ್ಗೆ ಭಾರಿ ಮೇಘಸ್ಫೋಟ ಸಂಭವಿಸಿದೆ. ಪರಿಣಾಮ ತಮ್ಸಾ ನದಿ ಉಕ್ಕಿ ಹರಿದಿದ್ದು, ಹಲವು ಮನೆಗಳು, ಅಂಗಡಿ ಮುಂಗಟ್ಟುಗಳು, ರಸ್ತೆಗಳು ನೀರಿನಲ್ಲಿ ಕೊಚ್ಚಿ ಹೋಗಿವೆ.

ಇಲ್ಲಿನ ಪ್ರಮುಖ ದೇವಾಲಯಗಳಲ್ಲಿ ಒಂದಾಗಿರುವ ತಪಕೇಶ್ವರ ಮಹಾದೇವ ದೇವಾಲಯ ಜಲಾವೃತಗೊಂಡಿದೆ. ದೇವಾಲಯದ ಅರ್ಚಕ ಆಚಾರ್ಯ ಬಿಪಿನ್ ಜೋಶಿ ಅವರು ಮಾತನಾಡಿ, ಬೆಳಿಗ್ಗೆಯಿಂದಲೇ ನದಿಯ ನೀರಿ ಮಟ್ಟ ಭಾರೀ ಪ್ರಮಾಣದಲ್ಲಿ ಹೆಚ್ಚಾಗಿ, ಉಕ್ಕಿ ಹರಿಯುತ್ತಿತ್ತು. ಇದೀಗ ಇಡೀ ದೇವಾಲಯದ ಆವರಣವು ಜಲಾವೃತಗೊಂಡಿದೆ. ದೇವಾಲಯದ ಗರ್ಭಗುಡಿ ಸುರಕ್ಷಿತವಾಗಿದೆ. ಈ ರೀತಿಯ ಪರಿಸ್ಥಿತಿ ಬಹಳ ಸಮಯದಿಂದ ಸಂಭವಿಸಿರಲಿಲ್ಲ. ಜನರು ನದಿಗಳ ಬಳಿ ಹೋಗುವುದನ್ನು ತಪ್ಪಿಸಬೇಕು. ಇಲ್ಲಿಯವರೆಗೆ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ ಎಂದು ಹೇಳಿದ್ದಾರೆ.

ನೀರಿನ ಮಟ್ಟ 10-12 ಅಡಿಗಳಿಗೆ ಏರಿಕೆಯಾಗಿದೆ. ದೇವಾಲಯ ಸಂಪೂರ್ಣ ಜಲಾವೃತಗೊಂಡಿದೆ ಎಂದು ಸ್ಥಳೀಯರೊಬ್ಬರು ಹೇಳಿದ್ದಾರೆ. ಸೋಮವಾರ ತಡರಾತ್ರಿ ಡೆಹ್ರಾಡೂನ್‌ನ ಸಹಸ್ರಧಾರದಲ್ಲಿ ಭಾರಿ ಮಳೆಯಿಂದಾಗಿ ಕೆಲವು ಅಂಗಡಿಗಳು ಹಾನಿಗೊಳಗಾಗಿವೆ.ಜಿಲ್ಲಾಡಳಿತ, ಎಸ್‌ಡಿಆರ್‌ಎಫ್ ಮತ್ತು ಪೊಲೀಸರು ಸ್ಥಳಕ್ಕೆ ತಲುಪಿದ್ದು, ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.

ಈ ನಿಟ್ಟಿನಲ್ಲಿ ನಾನು ಸ್ಥಳೀಯ ಆಡಳಿತದೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿದ್ದೇನೆ ಮತ್ತು ಪರಿಸ್ಥಿತಿಯನ್ನು ವೈಯಕ್ತಿಕವಾಗಿ ಮೇಲ್ವಿಚಾರಣೆ ಮಾಡುತ್ತಿದ್ದೇನೆ ಎಂದು ಉತ್ತರಾಖಂಡ ಸಿಎಂ ಪುಷ್ಕರ್ ಸಿಂಗ್ ಧಾಮಿ ಟ್ವೀಟ್ ಮಾಡಿದ್ದಾರೆ. ಗಂಟೆಗೆ 15 ಮಿಮೀಗಿಂತ ಹೆಚ್ಚಿನ ಮಳೆಯಾಗುವ ಸಾಧ್ಯತೆಯಿದ್ದು, ಗುಡುಗು ಸಹಿತ ಮಳೆ ಮತ್ತು ಗಂಟೆಗೆ 87 ಕಿ.ಮೀ ವೇಗದಲ್ಲಿ ಬೀಸುವ ಗಾಳಿ ಬೀಸಲಿದೆ ಎಂದು ರೆಡ್ ಅಲರ್ಟ್ ಮುನ್ಸೂಚನೆ ನೀಡಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !