ಹೊಸದಿಗಂತ ಪುತ್ತೂರು
ಪುತ್ತೂರಿನಾದ್ಯಂತ ಧಾರಾಕಾರ ಮಳೆಯಾಗುತ್ತಿದ್ದು, ಧರೆ ಕುಸಿದು ಗುಡ್ಡ ಪ್ರದೇಶದ ಹಲವು ಮನೆಗಳಿಗೆ ಅಪಾರ ಪ್ರಮಾಣದ ಹಾನಿ ಉಂಟಾಗಿದೆ. ಪುತ್ತೂರಿನ ಸಿಂಗಾಣಿಯಲ್ಲಿ ಸುರಿದ ಭಾರೀ ಮಳೆಯಿಂದಾಗಿ ಅಲ್ಲಿರುವ ಹಲವಾರು ಮನೆಗಳು ಕುಸಿದು ಬಿದ್ದಿವೆ.
ಅಷ್ಟೇ ಅಲ್ಲದೆ, ಭಾರೀ ಮಳೆಗೆ ಪುತ್ತೂರಿನಿಂದ ಕುಂಜೂರುಪಂಜ ಪಾಣಾಜೆಗೆ ಸಂಪರ್ಕಿಸುವ ಚೆಲ್ಯಡ್ಕ ಸೇತುವೆ ಕೂಡ ಮುಳುಗಡೆಯಾಗಿದ್ದು, ಪ್ರಯಾಣಿಕರು ಪರದಾಡುವಂತ ಸ್ಥಿತಿ ನಿರ್ಮಾಣವಾಗಿದೆ. ಈ ಸೇತುವೆ ಹಲವು ಗ್ರಾಮಗಳನ್ನ ಸಂಪರ್ಕಿಸುವ ರಸ್ತೆಯಾದ ಕಾರಣ ಅಜ್ಜಿಕಲ್ಲು, ದೇವಸ್ಯ ಭಾಗದ ಜನರಿಗೆ ಬಸ್ ಸಂಪರ್ಕಕ್ಕೆ ಬಹಳ ಸಮಸ್ಯೆಯನ್ನುಂಟು ಮಾಡಿದೆ.
ಇನ್ನು ಧರೆ ಕುಸಿದ ಸಿಂಗಾಣಿ ಪ್ರದೇಶಕ್ಕೆ ಮಾಜಿ ಶಾಸಕ ಸಂಜೀವ ಮಠಂದೂರು ಭೇಟಿ ನೀಡಿದ್ದು, ಸಂತ್ರಸ್ತ ಜನರಿಗೆ ಧೈರ್ಯ ತುಂಬುವ ಕೆಲಸ ಮಾಡಿದ್ದಾರೆ. ಅಷ್ಟೇ ಅಲ್ಲದೆ ಸಂಬಂಧಪಟ್ಟ ನಗರಸಭಾ ಅಧಿಕಾರಿಗಳಿಗೆ ಕ್ರಮ ಕೈಗೊಳ್ಳುವಂತೆ ಮಾಜಿ ಸಚಿವರು ಸೂಚಿಸಿದ್ದಾರೆ.
ಧರೆ ಕುಸಿದು ಹಾನಿಗೀಡಾದ ಬನ್ನೂರು ಜೈನರಗುರಿ ಮಜೀದ್ ಮನೆಗೆ ಕೂಡ ಭೇಟಿ ನೀಡಿರುವ ಮಾಜಿ ಶಾಸಕ ಸಂಜೀವ ಮಠಂದೂರು, ಘಟನೆಯಲ್ಲಿ ಗಾಯಗೊಂಡ ಇಬ್ಬರು ಮಕ್ಕಳ ಯೋಗಕ್ಷೇಮವನ್ನು ಸಹ ವಿಚಾರಿಸಿದ್ದಾರೆ. ಅದು ಮಾತ್ರವಲ್ಲದೆ ಸೂಕ್ತ ಪರಿಹಾರ ನೀಡುವಂತೆ ಅಧಿಕಾರಿಗಳಲ್ಲಿ ಮಾಜಿ ಸಚಿವ ಸಂಜೀವ ಮಠಂದೂರು ಮನವಿ ಮಾಡಿದ್ದಾರೆ.