ಹೊಸದಿಗಂತ ಡಿಜಿಟಲ್ ಡೆಸ್ಕ್:
ಉತ್ತರಾಖಂಡದಲ್ಲಿ ಮತ್ತೊಮ್ಮೆ ಪ್ರಕೃತಿಯು ಮುನಿಸಿಕೊಂಡಿದೆ. ಚಮೋಲಿ ಜಿಲ್ಲೆಯ ನಂದಾ ನಗರದಲ್ಲಿ ಬುಧವಾರ ತಡರಾತ್ರಿ ಸಂಭವಿಸಿದ ಮೇಘಸ್ಫೋಟದಿಂದಾಗಿ ಅನಾಹುತ ಉಂಟಾಗಿದೆ. ಅಕಸ್ಮಾತ್ತಾಗಿ ಸುರಿದ ಧಾರಾಕಾರ ಮಳೆಯಿಂದ ಭಾರೀ ಪ್ರಮಾಣದ ನೀರು ಹರಿದು ಬಂದು ಹಲವು ಕಟ್ಟಡಗಳನ್ನು ನೆಲಸಮಗೊಳಿಸಿದೆ.
ಮಾಹಿತಿಯ ಪ್ರಕಾರ, ಈ ಘಟನೆದಲ್ಲಿ 6 ಕಟ್ಟಡಗಳು ಕುಸಿದಿದ್ದು, 5ಕ್ಕೂ ಹೆಚ್ಚು ಜನರು ನಾಪತ್ತೆಯಾಗಿದ್ದಾರೆ. ಸ್ಥಳದಲ್ಲಿ ಭೀಕರ ಅವಶೇಷಗಳ ನಡುವೆಯೇ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಎಸ್‌ಡಿಆರ್‌ಎಫ್, ಎನ್‌ಡಿಆರ್‌ಎಫ್ ಹಾಗೂ ಲೋಕೋಪಯೋಗಿ ಇಲಾಖೆಯ ಸಿಬ್ಬಂದಿ, ಜೆಸಿಬಿ ಸೇರಿದಂತೆ ಹಲವು ಯಂತ್ರೋಪಕರಣಗಳ ನೆರವಿನಿಂದ ಕಾರ್ಯಾಚರಣೆ ನಡೆಸುತ್ತಿದ್ದಾರೆ.
ಇಲ್ಲಿಯವರೆಗೆ ಇಬ್ಬರನ್ನು ಜೀವಂತವಾಗಿ ರಕ್ಷಣೆ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಗಾಯಾಳುಗಳಿಗೆ ತಕ್ಷಣ ವೈದ್ಯಕೀಯ ನೆರವು ಒದಗಿಸಲು ಆಂಬ್ಯುಲೆನ್ಸ್ ಹಾಗೂ ಆರೋಗ್ಯ ತಂಡಗಳನ್ನು ಸ್ಥಳದಲ್ಲೇ ನಿಯೋಜಿಸಲಾಗಿದೆ.
ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದ್ದು, ಮುಂದಿನ ಕೆಲವು ದಿನಗಳಲ್ಲಿ ಚಮೋಲಿ ಜಿಲ್ಲೆಯಲ್ಲಿ ಮತ್ತಷ್ಟು ಮಳೆಯಾಗುವ ಸಾಧ್ಯತೆ ಇದೆ ಎಂದು ಎಚ್ಚರಿಸಿದೆ.