ಲೇಖಕಿ ಬಾನು ಮುಷ್ತಾಕ್‌ಗೆ ಅಂತಾರಾಷ್ಟ್ರೀಯ ಬೂಕರ್‌ ಸಾಹಿತ್ಯ ಪ್ರಶಸ್ತಿ: ಸಿಎಂ ಅಭಿನಂದನೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಕನ್ನಡದ ಪ್ರಸಿದ್ಧ ಸಾಹಿತಿ ಬಾನು ಮುಷ್ತಾಕ್ ಅವರು ಪ್ರತಿಷ್ಠಿತ ಅಂತರಾಷ್ಟ್ರೀಯ ಬೂಕರ್ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಸಿಎಂ ಸಿದ್ದರಾಮಯ್ಯ ಟ್ವೀಟ್‌ ಮೂಲಕ ಅಭಿನಂದನೆಯನ್ನು ತಿಳಿಸಿದ್ದಾರೆ.

ಅಂತಾರಾಷ್ಟ್ರೀಯ ಬೂಕರ್ ಸಾಹಿತ್ಯ ಪ್ರಶಸ್ತಿ ಪುರಸ್ಕೃತರಾಗಿರುವ ಕನ್ನಡದ ಹೆಮ್ಮೆಯ ಲೇಖಕಿ ಬಾನು ಮುಸ್ತಾಕ್ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು. ಇದು ಕನ್ನಡ, ಕನ್ನಡಿಗ ಮತ್ತು ಕರ್ನಾಟಕ ಸಂಭ್ರಮಿಸುವ ಹೊತ್ತು. ಈ ನೆಲದ ಸೌಹಾರ್ದತೆ, ಜಾತ್ಯತೀತತೆ ಮತ್ತು ಸೋದರತ್ವದ ನಿಜ ಮೌಲ್ಯಗಳನ್ನು ಮೈಗೂಡಿಸಿಕೊಂಡು ಬರೆಯುತ್ತಿರುವ ಬಾನು ಮುಸ್ತಾಕ್ ಅವರು ಕನ್ನಡದ ಹಿರಿಮೆಯ ಬಾವುಟವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಾರಿಸಿ ನಮಗೆಲ್ಲ ಗೌರವ ತಂದುಕೊಟ್ಟಿದ್ದಾರೆ. ಅವರು ಇನ್ನಷ್ಟು ಕಾಲ ಸತ್ವಯುತವಾಗಿ ಬರೆಯುತ್ತಾ ಕನ್ನಡದ ಕಂಪನ್ನು ಜಗದಗಲಕ್ಕೆ ಪಸರಿಸುತ್ತಾ ಇರಲಿ ಎಂದು ಹಾರೈಸುತ್ತೇನೆ. ಬೂಕರ್ ಪ್ರಶಸ್ತಿಗೆ ಭಾಜನವಾಗಿರುವ ಅವರ ಕೃತಿ ‘ಹೃದಯ ದೀಪ’ವನ್ನು ಇಂಗ್ಲೀಷ್ ಗೆ ಅನುವಾದಿಸಿರುವ ಪ್ರತಿಭಾವಂತ ಲೇಖಕಿ ದೀಪಾ ಭಸ್ತಿ ಅವರಿಗೂ ಕನ್ನಡಿಗರೆಲ್ಲರ ಪರವಾಗಿ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದಿದ್ದಾರೆ.

 ಬಾನು ಮುಷ್ತಾಕ್ ಅವರ ‘ಹಸೀನಾ ಮತ್ತು ಇತರ ಕತೆಗಳು’ ಕೃತಿಯ ಇಂಗ್ಲಿಷ್ ಅನುವಾದಿತ ಹಾರ್ಟ್ ಲ್ಯಾಂಪ್‌ಗೆ ಪ್ರಶಸ್ತಿ ಸಿಕ್ಕಿದೆ. ಈ ಮೂಲಕ ಇದೇ ಮೊದಲ ಬಾರಿಗೆ ಕನ್ನಡದ ಕೃತಿಗೆ ಈ ಪ್ರತಿಷ್ಠಿತ ಪ್ರಶಸ್ತಿ ಲಭಿಸಿರುವುದು ವಿಶೇಷ. ಬೂಕರ್ ಪ್ರಶಸ್ತಿ 50 ಸಾವಿರ ಪೌಂಡ್‌ (ಅಂದಾಜು 57.28 ಲಕ್ಷ ರೂ.) ಒಳಗೊಂಡಿದೆ. ಇದೇ ಅನುವಾದಿತ ಕೃತಿಗೆ ‘ಪೆನ್ ಟ್ರಾನ್ಸ್‌ಲೇಟ್ಸ್’ ಪ್ರಶಸ್ತಿಯೂ ಸಿಕ್ಕಿತ್ತು.

1990 ಮತ್ತು 2023ರ ನಡುವೆ ಪ್ರಕಟಗೊಂಡ 12 ಕತೆಗಳನ್ನೊಳಗೊಂಡ ಈ ಸಂಕಲನವನ್ನು ದೀಪಾ ಭಸ್ತಿ ಅವರು ಕನ್ನಡದಿಂದ ಇಂಗ್ಲಿಷ್‌ಗೆ ಅನುವಾದಿಸಿದ್ದರು. ಮುಸ್ಲಿಂ ಸಮುದಾಯದ ಬಾಲಕಿಯರು ಹಾಗೂ ಹೆಣ್ಣುಮಕ್ಕಳ ದೈನಂದಿನ ಬದುಕನ್ನು ಆಧಾರಿಸಿ ಈ ಕತೆಯನ್ನು ಬರೆಯಲಾಗಿತ್ತು. ಮೇ 21ರಂದು ಲಂಡನ್‌ನಲ್ಲಿ ಟೇಟ್ ಮಾಡರ್ನ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಧಿಕೃತವಾಗಿ ಪ್ರಶಸ್ತಿಯನ್ನು ಘೋಷಿಸಲಾಯಿತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!