ಹೊಸದಿಗಂತ ಡಿಜಿಟಲ್ ಡೆಸ್ಕ್:
ಲೋಕಸಭೆಯ ರಣಾಂಗಣದಲ್ಲಿ ಇಂದಿನಿಂದ ಕೈ ಕಲಿಗಳ ಆರ್ಭಟ ಆರಂಭವಾಗಲಿದೆ. ಪ್ರಜಾಪ್ರಭುತ್ವಕ್ಕಾಗಿ ನಡೆಯುವ ಯುದ್ಧದಲ್ಲಿ ತನ್ನ ವಿರೋಧಿಗಳನ್ನು ನಾಶಮಾಡಲು ಜೋಡೆತ್ತುಗಳು ಅಖಾಡಕ್ಕಿಳಿದಿದ್ದಾರೆ. ಚಿನ್ನದ ನಾಡಿನಿಂದ ಕಾಂಗ್ರೆಸ್ ನಾಯಕರು ಭಾರೀ ಪ್ರಚಾರ ನಡೆಸಲಿದ್ದಾರೆ.
ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಇಂದಿನಿಂದ ಲೋಕಸಭೆ ಚುನಾವಣೆ ಪ್ರಚಾರ ಆರಂಭಿಸಲಿದ್ದಾರೆ. ಇಂದು ಬೆಳಗ್ಗೆ 9.30ಕ್ಕೆ ಎಚ್‌ಎಎಲ್‌ನಿಂದ ಹೆಲಿಕಾಪ್ಟರ್ ಮೂಲಕ ಸಿಎಂ ಮತ್ತು ಡಿಸಿಎಂ ಮುಳಬಾಗಿಲಿಗೆ ತೆರಳಲಿದ್ದಾರೆ. ನಂತರ ಇಬ್ಬರೂ ಕೈಜೋಡಿಸಿ ಪ್ರಜಾಧ್ವನಿ 2 ಯಾತ್ರೆ ಮೂಲಕ ಒಗ್ಗಟ್ಟಿನ ಕಹಳೆ ಮೊಳಗಳಿದ್ದಾರೆ. ಕೆಲವು ಕ್ಷೇತ್ರಗಳಲ್ಲಿ ಜಂಟಿ ಅಥವಾ ಪ್ರತ್ಯೇಕ ಪ್ರಚಾರ ನಡೆಸಲು ಸಿಎಂ ಮತ್ತು ಡಿಸಿಎಂ ನಿರ್ಧರಿಸಿದ್ದಾರೆ. ಪ್ರಜಾಧ್ವನಿ-2 ಜೋಡೆತ್ತು ಯಾತ್ರೆ ಕುರುಡುಮಲೆ ದೇವಸ್ಥಾನದಿಂದ ಆರಂಭವಾಗಲಿದೆ.
ಇಂದು ಬೆಳಗ್ಗೆ 10:30ಕ್ಕೆ ಕುರುಡುಮಲೆ ಗಣಪತಿಗೆ ಪೂಜೆ ನೆರವೇರಿಸಿ ಪ್ರಚಾರಕ್ಕೆ ಚಾಲನೆ ನೀಡಲಿದ್ದಾರೆ. ಬಳಿಕ ಸಿದ್ದರಾಮಯ್ಯ ಹಾಗೂ ಡಿಕೆಶಿ ರೋಡ್ ಶೋ ನಡೆಸಲಿದ್ದಾರೆ. ಮೊದಲ ದಿನವಾದ ಇಂದು ಕೋಲಾರದಲ್ಲಿ ಸಿಎಂ ಹಾಗೂ ಡಿಸಿಎಂ ಚುನಾವಣಾ ಪ್ರಚಾರ ನಡೆಸಲಿದ್ದಾರೆ.