ಜಿ20 ಶೃಂಗಸಭೆಯ ಔತಣಕೂಟಕ್ಕೆ ಸಿಎಂ ಸಿದ್ದರಾಮಯ್ಯ ಗೈರು

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ದೆಹಲಿಯಲ್ಲಿ ಜಿ20 ಶೃಂಗಸಭೆ ಹಿನ್ನೆಲೆ ರಾಷ್ಟ್ರಪತಿ ಏರ್ಪಡಿಸಿರುವ ಔತಣಕೂಟದಲ್ಲಿ ಭಾಗಿಯಾಗದಿರಲು ಸಿಎಂ ಸಿದ್ದರಾಮಯ್ಯ ನಿರ್ಧರಿಸಿದ್ದಾರೆ.

ಜಿ20 ಶೃಂಗಸಭೆ ಹಿನ್ನೆಲೆ ಶನಿವಾರ ರಾಷ್ಟ್ರಪತಿಗಳಿಂದ ಔತಣಕೂಟ ಏರ್ಪಡಿಸಲಾಗಿದೆ. ಈ ಔತಣಕೂಟಕ್ಕೆ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಆಹ್ವಾನ ನೀಡಲಾಗಿದೆ‌. ಈ ಔತಣಕೂಟಕ್ಕೆ ಕಾಂಗ್ರೆಸ್ ಪಕ್ಷದ ಆಡಳಿತವಿರುವ ರಾಜ್ಯಗಳ ಮುಖ್ಯಮಂತ್ರಿಗಳು ಗೈರಾಗುತ್ತಿದ್ದಾರೆ. ಕರ್ನಾಟಕದ ಸಿಎಂ ಸಿದ್ದರಾಮಯ್ಯ ಕೂಡ ಔತಣಕೂಟಕ್ಕೆ ಹಾಜರಾಗದಿರಲು ನಿರ್ಧರಿಸಿದ್ದಾರೆ.

ಜಿ20 ಔತಣಕೂಟಕ್ಕೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಆಹ್ವಾನಿಸಲಾಗಿಲ್ಲ.‌ ಮಲ್ಲಿಕಾರ್ಜುನ ಖರ್ಗೆ ಕ್ಯಾಬಿನೆಟ್ ಮಂತ್ರಿ ದರ್ಜೆಯನ್ನು ಹೊಂದಿದ್ದಾರೆ.‌ ಇತರ ರಾಜಕೀಯ ಪಕ್ಷದ ನಾಯಕರಿಗೂ ಆಹ್ವಾನ ನೀಡಿಲ್ಲ ಎಂದು ಹೇಳಲಾಗಿದೆ. ಔತಣಕೂಟಕ್ಕೆ ಮಾಜಿ ಪ್ರಧಾನಿಗಳಾದ ಡಾ.ಮನಮೋಹನ್ ಸಿಂಗ್ ಹಾಗೂ ಹೆಚ್.ಡಿ.ದೇವೇಗೌಡರಿಗೂ ಆಹ್ವಾನ ನೀಡಲಾಗಿದೆ.

ಆದರೆ ಮಾಜಿ ಪ್ರಧಾನಿ ಹೆಚ್​ ಡಿ ದೇವೇಗೌಡ, ಅನಾರೋಗ್ಯದ ಹಿನ್ನೆಲೆ ಔತಣಕೂಟದಲ್ಲಿ ಭಾಗವಹಿಸಲು ಸಾಧ್ಯವಾಗುತ್ತಿಲ್ಲ ಎಂದು ಈಗಾಗಲೇ ಎಕ್ಸ್ ಜಾಲತಾಣದಲ್ಲಿ ​​ಪೋಸ್ಟ್ ಮಾಡಿದ್ದಾರೆ.

ಈಗಾಗಲೇ ಬಿಹಾರದ ನಿತೀಶ್ ಕುಮಾರ್, ಜಾರ್ಖಂಡ್​ನ ಹೇಮಂತ್ ಸೊರೆನ್, ಪಶ್ಚಿಮ ಬಂಗಾಳದ ಮಮತಾ ಬ್ಯಾನರ್ಜಿ, ತಮಿಳುನಾಡಿನ ಎಂ.ಕೆ. ಸ್ಟಾಲಿನ್, ದೆಹಲಿಯ ಅರವಿಂದ ಕೇಜ್ರಿವಾಲ್ ಮತ್ತು ಪಂಜಾಬ್​ನ ಭಗವಂತ್ ಮಾನ್ ಅವರು ಔತಣಕೂಟದಲ್ಲಿ ಪಾಲ್ಗೊಳ್ಳುವುದಾಗಿ ತಿಳಿಸಿದ್ದಾರೆ.

ಉಳಿದಂತೆ ಕಾಂಗ್ರೆಸ್ ಆಡಳಿತ ರಾಜ್ಯಗಳಾದ ರಾಜಸ್ಥಾನ, ಜಾರ್ಖಂಡ್​ನ ಸಿಎಂಗಳು ಅನಾರೋಗ್ಯ ಹಾಗೂ ವೈಯ್ಯಕ್ತಿಕ ಕಾರಣಗಳಿಂದ ಹಾಜರಾಗುತ್ತಿಲ್ಲ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!