ಹೊಸದಿಗಂತ ಡಿಜಿಟಲ್ ಡೆಸ್ಕ್:
ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಸುವರ್ಣ ಮಹೋತ್ಸವ -2025 ರ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಹತ್ವದ ಘೋಷಣೆ ಮಾಡಿದರು. ರಾಜ್ಯದಲ್ಲಿ ಪರಿಸರ ಸಂರಕ್ಷಣೆ ಮತ್ತು ಜಾಗೃತಿಗಾಗಿ ಒಂದು ಕೋಟಿ ರೂಪಾಯಿಗಳ ದತ್ತಿ ನಿಧಿಯನ್ನು ಸ್ಥಾಪಿಸಲಾಗುವುದು ಎಂದು ತಿಳಿಸಿದರು.
ಈ ನಿಧಿಯ ಠೇವಣಿಯಿಂದ ಬರುವ ಬಡ್ಡಿ ಹಣವನ್ನು ಪ್ರತಿ ವರ್ಷವೂ ಪರಿಸರ ಸಂಬಂಧಿ ಕಾರ್ಯಕ್ರಮಗಳನ್ನು ಆಯೋಜಿಸಲು ಬಳಸಲಾಗುತ್ತದೆ. ಅಲ್ಲದೆ, ಪರಿಸರ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿದ ಕನಿಷ್ಠ 5 ಪರಿಸರವಾದಿಗಳಿಗೆ ನಾಡಿನ ಹೆಮ್ಮೆಯ ‘ವೃಕ್ಷಮಾತೆ’ ಸಾಲು ಮರದ ತಿಮ್ಮಕ್ಕನವರ ಹೆಸರಿನಲ್ಲಿ ಪ್ರತಿ ವರ್ಷ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುವುದು ಎಂದು ಸಿಎಂ ಪ್ರಕಟಿಸಿದರು.
ಮಂಡಳಿ ಸ್ಥಾಪನೆಗೆ ಇಂದಿರಾಗಾಂಧಿ ನೆನಪು
ಇದೇ ಸಂದರ್ಭದಲ್ಲಿ ಮಾತನಾಡಿದ ಮುಖ್ಯಮಂತ್ರಿಗಳು, ನವೆಂಬರ್ 19, ಅಂದರೆ ಮಾಜಿ ಪ್ರಧಾನಿ ಶ್ರೀಮತಿ ಇಂದಿರಾಗಾಂಧಿಯವರ ಜನ್ಮದಿನದಂದು, 1974 ರಲ್ಲಿ ಮಾಲಿನ್ಯ ನಿಯಂತ್ರಣ ಮಂಡಳಿಯು ಸ್ಥಾಪನೆಯಾಯಿತು ಎಂಬುದನ್ನು ಸ್ಮರಿಸಿದರು. ಇಂದಿರಾಗಾಂಧಿಯವರು ಪರಿಸರ ಮತ್ತು ಅರಣ್ಯ ರಕ್ಷಣೆಗಾಗಿ ಹಲವು ಪ್ರಮುಖ ಕಾಯ್ದೆಗಳನ್ನು ಜಾರಿಗೆ ತಂದಿರುವುದನ್ನು ನೆನಪಿಸಿಕೊಂಡರು.
‘ಮಾಲಿನ್ಯ ರಹಿತ ಪರಿಸರ ಅಗತ್ಯ’ – ಸಿಎಂ ಕರೆ
ಬೆಂಗಳೂರು, ದಾವಣಗೆರೆ, ಮತ್ತು ಕಲಬುರ್ಗಿ ಸೇರಿದಂತೆ ರಾಜ್ಯದ ಕೆಲವು ನಗರಗಳು ಕೇಂದ್ರದ ವರದಿಯ ಪ್ರಕಾರ ದೇಶದ ಹೆಚ್ಚು ಮಾಲಿನ್ಯಗೊಂಡ ನಗರಗಳ ಪಟ್ಟಿಯಲ್ಲಿ ಸೇರಿರುವುದು ಆತಂಕಕಾರಿ ವಿಷಯ ಎಂದು ಸಿಎಂ ಅಭಿಪ್ರಾಯಪಟ್ಟರು. ಉತ್ತಮ ಪರಿಸರದಲ್ಲಿ ಬದುಕಲು ಮಾಲಿನ್ಯ ರಹಿತ ವಾತಾವರಣ ನಿರ್ಮಿಸುವುದು ಅತ್ಯಗತ್ಯ.
ಈ ನಿಟ್ಟಿನಲ್ಲಿ, ಪರಿಸರ ಸಂರಕ್ಷಣೆಯ ಜವಾಬ್ದಾರಿ ಕೇವಲ ಸರ್ಕಾರದ ಮೇಲಲ್ಲ. ಜನರು ಉಸಿರಾಡುವ ಗಾಳಿ, ನೀರು ಹಾಗೂ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು ಮತ್ತು ರಾಜ್ಯವನ್ನು ವಾಸಯೋಗ್ಯವನ್ನಾಗಿಸಲು ಪರಿಸರದ ಬಗ್ಗೆ ಸಕ್ರಿಯ ಕಾಳಜಿಯನ್ನು ಬೆಳೆಸಿಕೊಳ್ಳಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸಾರ್ವಜನಿಕರಿಗೆ ಕರೆ ನೀಡಿದರು.

