ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಾಂಗ್ರೆಸ್ ಪಕ್ಷದೊಳಗೆ ಪವರ್ ಶೇರಿಂಗ್ ಕುರಿತ ಗೊಂದಲಗಳು ಮುಂದುವರಿದಿರುವಾಗಲೇ, ಮುಖ್ಯಮಂತ್ರಿ ಸಿದ್ದರಾಮಯ್ಯನವರ ಆಪ್ತ ವಲಯವು ಮತ್ತೊಮ್ಮೆ ‘ಅಹಿಂದ’ ಶಕ್ತಿಯನ್ನು ಪ್ರದರ್ಶಿಸಲು ಮುಂದಾಗಿದೆ ಎನ್ನಲಾಗಿದೆ.
ಸಿಎಂ ಸಿದ್ದರಾಮಯ್ಯನವರ ಬೆಂಬಲಕ್ಕೆ ನಿಲ್ಲುವ ಉದ್ದೇಶದಿಂದ, ಹಿಂದುಳಿದ ವರ್ಗಗಳ ಒಕ್ಕೂಟದ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ಬೃಹತ್ ಅಹಿಂದ ಸಮಾವೇಶವನ್ನು ಆಯೋಜಿಸಲು ಸಿದ್ಧತೆಗಳು ನಡೆದಿವೆ. ಮೂಲಗಳ ಪ್ರಕಾರ, ಈ ಸಮಾವೇಶವು ಜನವರಿ ಕೊನೆಯ ವಾರದಲ್ಲಿ ನಡೆಯುವ ಸಾಧ್ಯತೆ ಇದೆ.
ಬೆಂಗಳೂರಿನಲ್ಲಿ ನಡೆಯಲಿರುವ ಈ ಬೃಹತ್ ಶಕ್ತಿ ಪ್ರದರ್ಶನದಲ್ಲಿ, ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ‘ಅಹಿಂದ ರತ್ನ’ ಎಂಬ ಬಿರುದನ್ನು ನೀಡಿ ಗೌರವಿಸಲು ಅವರ ಆಪ್ತ ಮೂಲಗಳು ಸಿದ್ಧತೆ ನಡೆಸುತ್ತಿವೆ ಎಂದು ತಿಳಿದುಬಂದಿದೆ. ಈ ನಡೆಯು, ಪಕ್ಷದಲ್ಲಿ ಅವರ ಸ್ಥಾನ ಮತ್ತು ಬೆಂಬಲವನ್ನು ಮತ್ತಷ್ಟು ಭದ್ರಪಡಿಸುವ ಪ್ರಯತ್ನವಾಗಿ ಪರಿಗಣಿಸಲಾಗಿದೆ.
ಆದರೆ, ಈ ಪ್ರತ್ಯೇಕ ಸಮಾವೇಶಕ್ಕೆ ಕಾಂಗ್ರೆಸ್ ಹೈಕಮಾಂಡ್ ಒಪ್ಪಿಗೆ ನೀಡುತ್ತದೆಯೇ ಎಂಬ ಕುತೂಹಲ ಹೆಚ್ಚಿದೆ. ಈ ಹಿಂದೆ ಹಾಸನದಲ್ಲಿ ನಡೆದ ಅಹಿಂದ ಸಮಾವೇಶದ ಸಂದರ್ಭದಲ್ಲಿ ಆದಂತೆ, ಹೈಕಮಾಂಡ್ ಈ ಬಾರಿಯೂ ಪಕ್ಷದ ವೇದಿಕೆಯಿಂದಲೇ ಕಾರ್ಯಕ್ರಮ ನಡೆಸುವಂತೆ ಸೂಚಿಸಿ ಅಸ್ತ್ರ ಪ್ರಯೋಗಿಸುತ್ತಾ ಎಂಬುದನ್ನು ಕಾದು ನೋಡಬೇಕಿದೆ. ಪಕ್ಷದ ಉನ್ನತ ನಾಯಕತ್ವದ ಎಲ್ಲಾ ಸೂಚನೆಗಳನ್ನು ಮೀರಿ, ಸಿಎಂ ಸಿದ್ದರಾಮಯ್ಯನವರು ಪ್ರತ್ಯೇಕವಾಗಿ ಆಯೋಜಿಸಲಾಗುವ ಈ ಅಹಿಂದ ಸಮಾವೇಶದಲ್ಲಿ ಭಾಗವಹಿಸುತ್ತಾರೆಯೇ ಎಂಬುದು ರಾಜ್ಯ ರಾಜಕೀಯದ ಬಹುದೊಡ್ಡ ಪ್ರಶ್ನೆಯಾಗಿದೆ.

