ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಅನ್ನಭಾಗ್ಯ ಸಂಬಂಧ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಲು ವಿಧಾನಸೌಧಕ್ಕೆ ಆಗಮಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಾಸ್ತು ಸಮಸ್ಯೆ ಇರುವ ದ್ವಾರವನ್ನು ತೆರೆಸಿ ಅದೇ ದ್ವಾರದಿಂದ ಒಳ ಪ್ರವೇಶಿಸಿ ವಾಸ್ತು ಬಗೆಗಿನ ತಮ್ಮ ನಿಲುವನ್ನು ಅಧಿಕಾರಿಗಳಿಗೆ ತಿಳಿಸಿದ್ದಾರೆ.
ಸಭೆ ಹಿನ್ನೆಲೆ ಕಚೇರಿಗೆ ಆಗಮಿಸಿದಾಗ ದಕ್ಷಿಣ ದ್ವಾರ ಮುಚ್ಚಿರುವುದನ್ನು ಗಮನಿಸಿದ ಸಿದ್ದರಾಮಯ್ಯ , ಅಧಿಕಾರಿಗಳನ್ನು ಪ್ರಶ್ನಿಸಿದ್ದಾರೆ. ಈ ವೇಳೆ, ವಾಸ್ತು ಕಾರಣದಿಂದ ಬಂದ್ ಮಾಡಲಾಗಿದೆ ಎಂದು ಅಧಿಕಾರಿಗಳು ಮುಖ್ಯಮಂತ್ರಿಗೆ ತಿಳಿಸಿದಾಗ , ಸಿಎಂ ಅಸಿರು ಬಾಗಿಲು ತೆರೆಯುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಅದರಂತೆ ಪಶ್ಚಿಮ ದ್ವಾರದಿಂದ ಒಳಗೆ ಹೋದ ಸಿಬ್ಬಂದಿ ದಕ್ಷಿಣದ ದ್ವಾರವನ್ನು ತೆರೆದಿದ್ದಾರೆ.
ದಕ್ಷಿಣ ದ್ವಾರ ತೆರೆಯುತ್ತಿದ್ದಂತೆ ಅದೇ ದ್ವಾರದ ಮೂಲಕವೇ ಸಿದ್ದರಾಮಯ್ಯ ತಮ್ಮ ಕಚೇರಿ ಪ್ರವೇಶಿಸಿದರು. ಈ ವೇಳೆ ಆರೋಗ್ಯಕರ ಮನಸ್ಸು, ಸ್ವಚ್ಚ ಹೃದಯ, ಜನಪರ ಕಾಳಜಿ, ಒಳ್ಳೆ ಗಾಳಿ ಬೆಳಕು ಬರುವಂತಿದ್ದರೆ ಅದೇ ಉತ್ತಮ ವಾಸ್ತು ಎಂದು ಅಧಿಕಾರಿಗಳಿಗೆ ತಮ್ಮ ನಿಲುವನ್ನು ಹಂಚಿಕೊಂಡರು.