ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿವಿ ಪ್ರಾದೇಶಿಕ ಕಚೇರಿಗೆ ಶಂಕು ಸ್ಥಾಪನೆ ನೆರವೇರಿಸಿದ ಸಿಎಂ ಸಿದ್ಧರಾಮಯ್ಯ

ಹೊಸ ದಿಗಂತ ವರದಿ, ಮಂಗಳೂರು :

ರಾಜ್ಯದ ಪ್ರತಿ ಜಿಲ್ಲೆಗಳಲ್ಲಿ ಮೆಡಿಕಲ್ ಕಾಲೇಜುಗಳ ನಿರ್ಮಾಣವಗಾಬೇಕು. ಆಗ ಮಾತ್ರ ಬಡವರ ಮಕ್ಕಳು ಕೂಡ ವೈದ್ಯಕೀಯ ಶಿಕ್ಷಣ ಪಡೆಯಲು ಅನುಕೂಲವಾಗಲಿದೆ. ಈ ನಿಟ್ಟಿನಲ್ಲಿ ಸರ್ಕಾರ ಗಮನಹರಿಸಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಮಂಗಳೂರಿನ ಮೇರಿಹಿಲ್‌ನಲ್ಲಿ ಶುಕ್ರವಾರ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾನಿಲಯದ ಪ್ರಾದೇಶಿಕ ಕೇಂದ್ರಕ್ಕೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ಎಲ್ಲಾ ಜಿಲ್ಲೆಗಳಲ್ಲಿ ಮೆಡಿಕಲ್ ಕಾಲೇಜುಗಳಾದರೆ ಗ್ರಾಮೀಣ ಭಾಗದ ಜನತೆಗೆ ಉತ್ತಮ ಆರೋಗ್ಯ ಸೇವೆ ದೊರೆಯಲಿದೆ. ಬಡವರ ಮಕ್ಕಳು ವೈದ್ಯರಾದರೆ ಅವರಿಗೆ ಗ್ರಾಮೀಣ ಜನತೆಯ ಕಷ್ಟಗಳ ಅರಿವಿರುತ್ತದೆ. ಜನಸಾಮಾನ್ಯರೊಂದಿಗೆ ಬೆರೆಯುವ ಅವರು ಉತ್ತಮ ಆರೋಗ್ಯ ಸೇವೆಯನ್ನೂ ನೀಡಬಲ್ಲರು. ಜೊತೆಗೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳ ನಿರ್ಮಾಣವೂ ಪ್ರತಿಜಿಲ್ಲೆಗಳಲ್ಲಿ ಆಗಬೇಕಿದ್ದು, ಸರ್ಕಾರ ಈ ನಿಟ್ಟಿನಲ್ಲಿ ಮುತುವರ್ಜಿ ವಹಿಸಿದೆ ಎಂದರು.

ರಾಜೀವ್ ಗಾಂಧಿ ವಿಶ್ವ ವಿದ್ಯಾಲಯ ಏಷ್ಯಾದಲ್ಲಿಯೇ ದೊಡ್ಡ ಆರೋಗ್ಯ ವಿಶ್ಯವಿದ್ಯಾಲಯವಾಗಿ ಗುರುತಿಸಿಕೊಂಡಿದೆ. ಇದರಡಿಯಲ್ಲಿ 1250 ಕಾಲೇಜುಗಳಿದ್ದು, 3.50ಲಕ್ಷ ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ. ಮಂಗಳೂರಿನಲ್ಲಿ ಪ್ರಾದೇಶಿಕ ಕೇಂದ್ರ ನಿರ್ಮಾಣ ವಾಗುತ್ತಿರುವುದರಿಂದ ಈ ಭಾಗದ ಹೆಚ್ಚಿನ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ. ಗುಣಮಟ್ಟದ ಶಿಕ್ಷಣ ಈ ಸಂಸ್ಥೆಯ ಮೂಲಕ ದೊರೆಯಬೇಕು. ಜೊತೆಗೆ ಹೆಚ್ಚಿನ ಸಂಶೋಧನೆಯೂ ನಡೆಯಬೇಕು ಎಂದು ಮುಖ್ಯಮಂತ್ರಿಗಳು ಹೇಳಿದರು.

ಸರ್ಕಾರಿ ಆಸ್ಪತ್ರೆಗಳು ಸಮಾಜಮುಖಿಯಾಗಿ, ಜನಪರವಾಗಿ ಕೆಲಸ ಮಾಡಬೇಕು. ಗುಣಮಟ್ಟದ ಸೇವೆ ಇಲ್ಲಿ ದೊರೆಯಬೇಕು. ಖಾಸಗಿ ಆಸ್ಪತ್ರೆಗಳ ಮಾದರಿಯಲ್ಲಿ ಶುಚಿತ್ವ ಮತ್ತು ನಿರ್ವಹಣೆ ಕಾಪಾಡುವ ಜೊತೆಗೆ ಗುಣಮಟ್ಟದ ಚಿಕಿತ್ಸಾ ಸೌಲಭ್ಯ ಸಿಗುವಂತಾಗಬೇಕು. ಶ್ರೀಮಂತರು ಮತ್ತು ರಾಜಕಾರಣಿಗಳೂ ಸರ್ಕಾರಿ ಆಸ್ಪತ್ರೆಗೆ ಬರುವಂತಾಗಬೇಕು ಎನ್ನುವ ದಿಕ್ಕಿನಲ್ಲಿ ಕಾರ್ಯಕ್ರಮಗಳನ್ನು ರೂಪಿಸುತ್ತಿದ್ದೇವೆ ಎಂದು ಅವರು ಹೇಳಿದರು.

ಕಾರ್ಯಕ್ರಮದಲ್ಲಿ ಸ್ಪೀಕರ್ ಯು.ಟಿ.ಖಾದರ್, ಮೇಯರ್ ಮನೋಜ್ ಕುಮಾರ್ ಕೋಡಿಕಲ್, ದ.ಕ. ಸಂಸದ ಕ್ಯಾ.ಬ್ರಿಜೇಶ್ ಚೌಟ, ವೈದ್ಯಕೀಯ ಶಿಕ್ಷಣ ಸಚಿವ ಶರಣ ಪ್ರಕಾಶ್ ಪಾಟೀಲ್, ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ಶಾಸಕರಾದ ಡಾ.ವೈ.ಭರತ್ ಶೆಟ್ಟಿ, ಅಶೋಕ್ ಕುಮಾರ್ ರೈ, ಸಿಎಂ ರಾಜಕೀಯ ಕಾರ್ಯದರ್ಶಿ ಗೋವಿಂದ ರಾಜು, ಹೆಚ್ಚುವರಿ ಕಾರ್ಯದರ್ಶಿ ಎಲ್.ಕೆ ಅತೀಕ್, ರಾಜೀವ್ ಗಾಂಧಿ ರೋಗ್ಯ ವಿಜ್ಞಾನ ವಿವಿ ಕುಲಪತಿ ಡಾ.ಎಂ.ಕೆ.ರಮೇಶ್, ರಿಜಿಸ್ಟ್ರಾರ್ ಪಿ.ಆರ್.ಶಿವಪ್ರಸಾದ್, ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಮತ್ತಿತರರು ಉಪಸ್ಥಿತರಿದ್ದರು.
 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!