ಹೊಸ ದಿಗಂತ ಡಿಜಿಟಲ್ ಡೆಸ್ಕ್:
ದೆಹಲಿಯಲ್ಲಿ ಇಂದು ಸಿಎಂ ಸಿದ್ದರಾಮಯ್ಯ ಅವರು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿ ಮಾಡಿ, ರಾಜ್ಯಗಳ ನಡುವೆ ತೆರಿಗೆ ಹಂಚಿಕೆಗೆ ಸಂಬಂಧಿಸಿದಂತೆ ಬೆಳವಣಿಗೆಗೆ ಪೂರಕವಾಗಿರುವ ವಿಧಾನವನ್ನು ಅನುಸರಿಸಲು 16 ನೇ ಹಣಕಾಸು ಆಯೋಗಕ್ಕೆ ಪ್ರತಿಪಾದಿಸುವಂತೆ ವಿನಂತಿಸಿದರು.
15 ನೇ ಹಣಕಾಸು ಆಯೋಗವು ತನ್ನ ಶಿಫಾರಸಿನಲ್ಲಿ ಕರ್ನಾಟಕದ ತೆರಿಗೆ ಪಾಲನ್ನು ಶೇ. 4.713 ರಿಂದ ಶೇ.3.647 ಕ್ಕೆ ಇಳಿಕೆ ಮಾಡಿದ್ದರಿಂದ ರಾಜ್ಯದ ತೆರಿಗೆ ಪಾಲು 14ನೇ ಹಣಕಾಸು ಆಯೋಗಕ್ಕೆ ಹೋಲಿಸಿದರೆ 15ನೇ ಹಣಕಾಸು ಆಯೋಗದ ಅವಧಿಯಲ್ಲಿ ಶೇ.23ರಷ್ಟು ಕಡಿಮೆಯಾಗಿರುವುದರ ಕುರಿತು ಮುಖ್ಯಮಂತ್ರಿಗಳು ಕೇಂದ್ರ ಹಣಕಾಸು ಸಚಿವರಿಗೆ ವಿವರಿಸಿದರು.
15 ನೇ ಹಣಕಾಸು ಆಯೋಗವು ಆದಾಯ-ದೂರ ಮಾನದಂಡಕ್ಕೆ ಶೇ.45 ರಷ್ಟು ಅಂಕವನ್ನು ನೀಡಿತ್ತು. ರಾಜ್ಯಕ್ಕೆ ಇದರಿಂದ ಉಂಟಾದ ನಷ್ಟವನ್ನು ತಪ್ಪಿಸುವ ಸಲುವಾಗಿ ಆದಾಯ-ದೂರ ಮಾನದಂಡದ ಅಂಕವನ್ನು ಶೇ.20 ರಷ್ಟು ಕಡಿಮೆ ಮಾಡಿ, ದೇಶದ ಆರ್ಥಿಕ ಪ್ರಗತಿಗೆ (GDP) ರಾಜ್ಯಗಳು ನೀಡುವ ಕೊಡುಗೆಯನ್ನು ಪರಿಗಣಿಸಬೇಕು ಹಾಗೂ ಇದಕ್ಕೆ ಶೇ.20 ರಷ್ಟು ಅಂಕವನ್ನು ನೀಡಬೇಕೆಂದು ಮನವಿ ಮಾಡಿದರು.
ಮುಖ್ಯಮಂತ್ರಿಯವರು ಬೆಂಗಳೂರು, ಕಲ್ಯಾಣ ಕರ್ನಾಟಕ ಮತ್ತು ಮಲೆನಾಡು ಪ್ರದೇಶದ ಅಭಿವೃದ್ಧಿ ಸವಾಲುಗಳನ್ನು ಸಹ ಹಣಕಾಸು ಸಚಿವರ ಮುಂದೆ ಪ್ರಸ್ತಾಪಿಸಿದರು. ರಾಜ್ಯಗಳ ಬೆಳವಣಿಗೆಯನ್ನು ಉತ್ತೇಜಿಸಲು ನ್ಯಾಯಯುತ ಮತ್ತು ಬೆಳವಣಿಗೆಗೆ ಪೂರಕವಾಗುವ ತೆರಿಗೆ ಹಂಚಿಕೆಯ ಅವಶ್ಯಕತೆಯನ್ನು ಮನವರಿಕೆ ಮಾಡಿದರು.
16ನೇ ಹಣಕಾಸು ಆಯೋಗಕ್ಕೆ ಕೇಂದ್ರ ಸರ್ಕಾರ ಸಲ್ಲಿಸುವ ಜ್ಞಾಪಕ ಪತ್ರದಲ್ಲಿ ರಾಜ್ಯ ಸರ್ಕಾರದ ಈ ಪ್ರಸ್ತಾವನೆಗಳನ್ನು ಸೇರಿಸುವಂತೆ ಹಣಕಾಸು ಸಚಿವರಿಗೆ ಮನವಿ ಮಾಡುವ ಮೂಲಕ, ಎಲ್ಲಾ ರಾಜ್ಯಗಳು ದೇಶದ ಅಭಿವೃದ್ಧಿಗೆ ಹೆಚ್ಚು ಪರಿಣಾಮಕಾರಿಯಾಗಿ ಕೊಡುಗೆ ನೀಡಲು ಬೆಳವಣಿಗೆ ಆಧಾರಿತ ತೆರಿಗೆ ಹಂಚಿಕೆ ಅವಶ್ಯಕ ಎಂದು ಒತ್ತಿ ಹೇಳುವುದರೊಂದಿಗೆ ಸಭೆ ಮುಕ್ತಾಯವಾಯಿತು.