ನೀರಾವರಿ ಯೋಜನೆ, ಬರ ಚರ್ಚೆಗೆ ಕೇಂದ್ರಕ್ಕೆ ಸರ್ವಪಕ್ಷ ನಿಯೋಗ ಕರೆದೊಯ್ಯಲು ಸಿದ್ಧ: ಸಿಎಂ ಸಿದ್ದರಾಮಯ್ಯ

ಹೊಸದಿಗಂತ ಡಿಜಿಟಲ್ ಡೆಸ್ಕ್:
 
ರಾಜ್ಯದ ನೀರಾವರಿ ಯೋಜನೆಗಳಿಗೆ ಸಂಬಂಧ ಪಟ್ಟ ಅನುದಾನ ಮತ್ತು ತಿರುವಳಿಗಳನ್ನು ಪಡೆಯಲು ಕೇಂದ್ರ ಸರ್ಕಾರದ ಬಳಿಗೆ ಸರ್ವ ಪಕ್ಷ ನಿಯೋಗ ಕೊಂಡೊಯ್ಯಲು ಸರ್ಕಾರ ಸಿದ್ಧವಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ವಿಧಾನಸಭೆಯಲ್ಲಿ ಉತ್ತರ ಕರ್ನಾಟಕದ ಮೇಲಿನ ಚರ್ಚೆಗೆ ಉತ್ತರಿಸಿದ ಅವರು, ನೀರಾವರಿಗಾಗಿ ಕೃಷ್ಣಾ ಭಾಗ್ಯ ಜಲ ನಿಗಮ 3ನೇ ಹಂತದಲ್ಲಿ 130 ಟಿಎಂಸಿ ನೀರು ಬಳಸಬೇಕು ಎಂಬ ಆದೇಶವಿದ್ದರೂ ಅಫಿಡವಿಟ್ ಹಾಕಿಲ್ಲ. 2ನೇ ಟ್ರಿಬ್ಯುನಲ್ ಬ್ರಿಜೇಶ್ ಕುಮಾರ್ ವರದಿ ಕೊಟ್ಟು 13 ವರ್ಷಗಳಾಯಿತು. ಇಷ್ಟು ವರ್ಷಗಳಿಂದ ಗೆಜೆಟ್ ಅಧಿಸೂಚನೆ ಆಗಿಲ್ಲ. ಇದು ಆಗದೇ ಆಲಮಟ್ಟಿ ಜಲಾಶಯದ ಎತ್ತರವನ್ನು 524 ಮೀಟರ್​​ಗೆ ಏರಿಸಲಾಗುವುದಿಲ್ಲ. ಈ ಬಗ್ಗೆ ಒತ್ತಾಯಿಸಲು ಸರ್ವ ಪಕ್ಷ ನಿಯೋಗ ಕರೆದೊಯ್ಯಲು ನಾವು ಸಿದ್ದರಿದ್ದೇವೆ. ಆದರೆ ಪ್ರಧಾನಿಗಳು ಭೇಟಿಗೆ ಅವಕಾಶವನ್ನೇ ನೀಡುವುದಿಲ್ಲ ಎಂದು ದೂರಿದರು.

ಮಹದಾಯಿ ಕುಡಿಯುವ ನೀರಿನ ಯೋಜನೆಗೆ ಅರಣ್ಯ ಮತ್ತು ಪರಿಸರದ ಬಗ್ಗೆ ತಿರುವಳಿಯಾಗಬೇಕು. ಅವರು ಕೊಟ್ಟ ತಕ್ಷಣ ನಾವು ಕೆಲಸ ಪ್ರಾರಂಭ ಮಾಡುತ್ತೇವೆ. ಮಹದಾಯಿ, ಕೃಷ್ಣಾ ಮೇಲ್ದಂಡೆಗೂ ಸರ್ವ ಪಕ್ಷ ನಿಯೋಗ ಕರೆದೊಯ್ಯಲು ನಾವು ಸಿದ್ದರಿದ್ದೇವೆ ಎಂದರು.

ತಮಿಳುನಾಡು, ಕೇರಳ, ಆಂಧ್ರದ ಜೊತೆ ಮಾತುಕತೆ ವಿಫಲವಾಗಿ ನ್ಯಾಯಮಂಡಳಿಯು 193 ಟಿಎಂಸಿ ನೀರು ಕೊಡಬೇಕು ಎಂದು ತೀರ್ಪು ನೀಡಿತ್ತು. ನಂತರ 177.25 ಟಿಎಂಸಿಯನ್ನು ತಮಿಳುನಾಡಿಗೆ ಬಿಡಗಡೆ ಮಾಡಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿದೆ ಎಂದು ಸಿಎಂ ವಿವರಿಸಿದರು.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!