ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಂದು ಸಿಎಂ ಸಿದ್ದರಾಮಯ್ಯ ವಿಜಯನಗರ ಪ್ರವಾಸ ಹಮ್ಮಿಕೊಳ್ಳಲಿದ್ದು, ಹಂಪಿಯಲ್ಲಿ ಕರ್ನಾಟಕ ಸಂಭ್ರಮ-50 ಜ್ಯೋತಿ ರಥ ಯಾತ್ರೆಗೆ ಚಾಲನೆ ನೀಡಲಿದ್ದಾರೆ.
ಮೈಸೂರು ರಾಜ್ಯಕ್ಕೆ ಕರ್ನಾಟಕ ಎಂದು ನಾಮಕರಣ ಮಾಡಿ ೫೦ ವರ್ಷವಾಗಿದೆ, ಈ ಹಿನ್ನೆಲೆಯಲ್ಲಿ ಕರ್ನಾಟಕ ಸಂಭ್ರಮ-50 ಹೆಸರಿನಲ್ಲಿ ವರ್ಷಪೂರ್ತಿ ಕನ್ನಡ ರಾಜ್ಯೋತ್ಸವ ಆಚರಣೆ ಮಾಡಲಾಗುತ್ತದೆ.
ಕೊಪ್ಪಳದ ಗಿಣಿಗೇರಾ ಏರ್‌ಸ್ಟ್ರಿಪ್‌ಗೆ ವಿಶೇಷ ವಿಮಾನದ ಮೂಲಕ ಸಿಎಂ ಬಂದಿಳಿಯಲಿದ್ದು, ಹೊಸಪೇಟೆಗೆ ಪ್ರಯಾಣ ಬೆಳೆಸಲಿದ್ದಾರೆ. ಸಂಜೆ 5:30ಕ್ಕೆ ಹಂಪಿಯ ಶ್ರೀ ವಿರೂಪಾಕ್ಷ ದೇವಸ್ಥಾನದ ಆವರಣದಲ್ಲಿ ದೀಪ ಬೆಳಗಿಸುವ ಮೂಲಕ ಕರ್ನಾಟಕ ಸಂಭ್ರಮ-50 ಜ್ಯೋತಿ ರಥ ಯಾತ್ರೆಗೆ ಚಾಲನೆ ನೀಡಲಿದ್ದಾರೆ.
ಸಿಎಂ ಸಿದ್ದರಾಮಯ್ಯ ವಿರೂಪಾಕ್ಷೇಶ್ವರ ದೇವಾಲಯದಲ್ಲಿ ಗಂಗಾ ಜಲಾಭಿಷೇಕ ನೆರವೇರಿಸಲಿದ್ದಾರೆ. ತದನಂತರ ಭುವನೇಶ್ವರಿ ದೇಗುಲದಲ್ಲಿ ಪಂಚಾಮೃತ ಅಭಿಷೇಕ ಸಹಿತ ಪೂಜೆ ನೆರವೇರಿಸಲಿದ್ದಾರೆ.
ನಂತರ ಕಲಾತಂಡಗಳ ಜೊತೆ ಕಾಲ್ನಡಿಯಲ್ಲೇ ಬಸವಣ್ಣ ಮಂಟಪ ವೇದಿಕೆವರೆಗೂ ಸಾಗಲಿದ್ದಾರೆ, ನಂತರ ಹೆಲಿಕಾಪ್ಟರ್‌ನಿಂದ ಪುಷ್ಪವೃಷ್ಟಿ ನಡೆಯಲಿದ್ದು, ಬಳಿಕ ಬಸವಣ್ಣ ಮಂಟಪ ವೇದಿಕೆಯಲ್ಲಿ ಜ್ಯೋತಿ ರಥಯಾತ್ರೆಗೆ ಚಾಲನೆ ನೀಡಲಿದ್ದಾರೆ.