ಹೊಸದಿಗಂತ ಡಿಜಿಟಲ್ ಡೆಸ್ಕ್:
ಶಿವಮೊಗ್ಗ ಜಿಲ್ಲೆಯ ಸಾಗರದ ಸಿಗಂದೂರು ಸೇತುವೆ ಉದ್ಘಾಟನೆಗೂ ಮುನ್ನವೇ ಸಮಸ್ಯೆಗಳು ಶುರುವಾಗಿದ್ದು, ಕಾರ್ಯಕ್ರಮದಲ್ಲಿ ಭಾಗಿಯಾಗುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಈ ಕುರಿತು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿಯವರಿಗೆ ಪತ್ರ ಬರೆದಿರುವ ಅವರು, ಸಾಗರ – ಸಿಗಂದೂರು ನಡುವಿನ ಸೇತುವೆ ಉದ್ಘಾಟನಾ ಸಮಾರಂಭಕ್ಕೆ ನನ್ನನ್ನು ತಡವಾಗಿ ಆಮಂತ್ರಿಸಿದ್ದು, ಬೇರೆಡೆ ಕಾರ್ಯಕ್ರಮಗಳನ್ನು ನಾನು ಹಮ್ಮಿಕೊಂಡಿರುವುದರಿಂದ ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದ್ದಾರೆ.
ಕೇಂದ್ರ ಹೆದ್ದಾರಿ ಮತ್ತು ಭೂಸಾರಿಗೆ ಇಲಾಖೆ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಶಿವಮೊಗ್ಗ ಜಿಲ್ಲೆ ಸಾಗರದ ನೆಹರೂ ಕ್ರೀಡಾಂಗಣದಲ್ಲಿ ಇಂದು ಸಾಗರ – ಸಿಗಂದೂರು ನಡುವಿನ ಸೇತುವೆ ಉದ್ಘಾಟನಾ ಸಮಾರಂಭವನ್ನು ಏರ್ಪಡಿಸಿದೆ. ಈ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯಲ್ಲಿ ನನ್ನ ಹೆಸರನ್ನು ಸಹ ಮುದ್ರಿಸಲಾಗಿದೆ. ಆದರೆ ನನಗೆ ಈ ಬಗ್ಗೆ ಮುಂಚಿತವಾಗಿ ಮಾಹಿತಿ ನೀಡದ ಕಾರಣದಿಂದ ಈಗಾಗಲೇ ನನ್ನ ಅಧ್ಯಕ್ಷತೆಯಲ್ಲಿ ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನಲ್ಲಿ ಹಲವು ಅಭಿವೃದ್ಧಿ ಕಾರ್ಯಗಳನ್ನು ಹಮ್ಮಿಕೊಳ್ಳಲಾಗಿದೆ. ಅಲ್ಲಿಗೆ ಹೋಗಬೇಕಾದ ಕಾರಣ ಸಿಗಂದೂರಿಗೆ ಹೋಗಲು ಆಗುವುದಿಲ್ಲ ಎಂದಿದ್ದಾರೆ.
ಕೇಂದ್ರ ಹೆದ್ದಾರಿ ಮತ್ತು ಭೂಸಾರಿಗೆ ಇಲಾಖೆಯು ಇಂತಹ ರಾಜ್ಯಮಟ್ಟದ ಕಾರ್ಯಕ್ರಮ ಆಯೋಜನೆಗೆ ಮುನ್ನ ರಾಜ್ಯ ಸರ್ಕಾರವನ್ನು ಮುಂಚಿತವಾಗಿಯೇ ಸಂಪರ್ಕಿಸಿದ್ದರೆ ಮತ್ತಷ್ಟು ಸಮರ್ಪಕವಾಗಿರುತ್ತಿತ್ತು. ಮುಂದೆ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸುವ ಸಂದರ್ಭದಲ್ಲಿ ರಾಜ್ಯ ಸರ್ಕಾರವನ್ನು ಸಕಾಲದಲ್ಲಿ ಸಂಪರ್ಕಿಸುವಂತೆ ಹೆದ್ದಾರಿ ಮತ್ತು ಭೂಸಾರಿಗೆ ಇಲಾಖೆಗೆ ಸೂಚನೆ ನೀಡಬೇಕು ಎಂದು ತಮ್ಮಲ್ಲಿ ವಿನಂತಿಸುತ್ತೇನೆ.
ಇಂದಿನ ಕಾರ್ಯಕ್ರಮವನ್ನು ಮುಂದೂಡಿ, ನಿಮಗೆ ಅನುಕೂಲವಾಗುವ ಒಂದೆರೆಡು ದಿನಾಂಕಗಳನ್ನು ನನಗೆ ಒದಗಿಸಬೇಕೆಂದು ಕೋರುತ್ತೇನೆ. ಆ ಮೂಲಕ ಇಂಥದ್ದೊಂದು ಮಹತ್ವದ ರಾಜ್ಯಮಟ್ಟದ ಕಾರ್ಯಕ್ರಮದಲ್ಲಿ ನಾನು ಕೂಡ ಭಾಗವಹಿಸಲು ಸಾಧ್ಯವಾಗಲಿದೆ ಎಂದು ಹೇಳಿದ್ದಾರೆ.