ಹೊಸದಿಗಂತ ಡಿಜಿಟಲ್ ಡೆಸ್ಕ್:
ವಯನಾಡ್‌ನಲ್ಲಿ ಭೂಕುಸಿತ ಸಂಭವಿಸಿ ಕನಿಷ್ಠ 24 ಮಂದಿ ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಇಂದು ನಡೆಯಬೇಕಿದ್ದ ಎಲ್ಲಾ ರಾಜ್ಯ ಸರ್ಕಾರಿ ಸಾರ್ವಜನಿಕ ಕಾರ್ಯಕ್ರಮಗಳನ್ನು ಮುಂದೂಡುವಂತೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಆದೇಶಿಸಿದ್ದಾರೆ.
ಕೇರಳ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಪ್ರಕಾರ, ಇಂದು ಮುಂಜಾನೆ 3.49 ರ ಸುಮಾರಿಗೆ ವಯನಾಡು ಜಿಲ್ಲೆಯ ವೈತ್ತಿರಿ ತಾಲೂಕಿನ ಮೆಪ್ಪಾಡಿ ಪಂಚಾಯತ್‌ನಲ್ಲಿ ಭೂಕುಸಿತ ಸಂಭವಿಸಿದೆ.
ಅಧಿಕಾರಿಗಳ ಪ್ರಕಾರ, ಭಾರೀ ಭೂಕುಸಿತದಲ್ಲಿ ಸುಮಾರು 70 ಜನರು ಗಾಯಗೊಂಡಿದ್ದಾರೆ. ಜನರನ್ನು ರಕ್ಷಿಸಲು ರಾಜ್ಯ ಸರ್ಕಾರ ಸಾಧ್ಯವಿರುವ ಎಲ್ಲವನ್ನೂ ಮಾಡುತ್ತಿದೆ ಎಂದು ಆರೋಗ್ಯ ಸಚಿವೆ ವೀಣಾ ಜಾರ್ಜ್ ಹೇಳಿದ್ದಾರೆ.
“ನಾವು ವಿವಿಧ ಆಸ್ಪತ್ರೆಗಳಲ್ಲಿ 24 ಮೃತದೇಹಗಳನ್ನು ಸ್ವೀಕರಿಸಿದ್ದೇವೆ. ಸುಮಾರು 70 ಜನರು ಗಾಯಗೊಂಡಿದ್ದಾರೆ. ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆಯನ್ನು ನಾವು ಖಚಿತಪಡಿಸಿದ್ದೇವೆ. NDRF ಮತ್ತು ನಾಗರಿಕ ರಕ್ಷಣಾ ತಂಡಗಳು ಅಲ್ಲಿವೆ, ನೌಕಾಪಡೆಯ ತಂಡವೂ ಶೀಘ್ರದಲ್ಲೇ ಅಲ್ಲಿಗೆ ತಲುಪಲಿದೆ” ಎಂದು ಜಾರ್ಜ್ ಹೇಳಿದರು.