ಮಳೆ ಹಾನಿ ವೀಕ್ಷಣೆಗೆ ಆಗಮಿಸಿದ ಸಿಎಂ: ಕೊಡಗಿನ ಗಡಿಯಲ್ಲಿ ಪ್ರಮುಖರಿಂದ‌ ಸ್ವಾಗತ

ದಿಗಂತ ವರದಿ ಮಡಿಕೇರಿ:

ಮಳೆ ಹಾನಿ ಪ್ರದೇಶಗಳ ವೀಕ್ಷಣೆಂದು ಕೊಡಗಿಗೆ ಆಗಮಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕೊಡಗಿನ ಗಡಿ ಆನೆಚೌಕೂರು ಗೇಟ್ ಬಳಿ ಭವ್ಯ ಸ್ವಾಗತ ಕೋರಲಾಯಿತು.
ಮಧ್ಯಾಹ್ನ 12.45ಕ್ಕೆ ಕೊಡಗಿನ ಶ್ರೀಮಂಗಲಕ್ಕೆ ಭೇಟಿ ನೀಡಬೇಕಿದ್ದ ಸಿದ್ದರಾಮಯ್ಯ ಅವರು 2.15ರ ಸುಮಾರಿಗೆ ಆನೆಚೌಕೂರು ಗೇಟ್’ಗೆ ಆಗಮಿಸಿದರು.

ಕೊಡಗಿನ ಶಾಸಕದ್ವಯರಾದ ಎ.ಎಸ್.ಪೊನ್ನಣ್ಣ.ಡಾ.ಮಂಥರ್ ಗೌಡ, ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಸ್.ಭೋಸರಾಜು, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ.ಎನ್.ವಿ.ಪ್ರಸಾದ್, ಜಿಲ್ಲಾಧಿಕಾರಿ ವೆಂಕಟ ರಾಜಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಹಾಗೂ ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ಧರ್ಮಜ ಉತ್ತಪ್ಪ ಸೇರಿದಂತೆ ಪ್ರಮುಖರು ಮುಖ್ಯಮಂತ್ರಿಯವರನ್ನು ಬರಮಾಡಿಕೊಂಡರು.

ಸರ್ಕಾರದ ಕಾರ್ಯದರ್ಶಿ ಶಾಲಿನಿ ರಜನೀಶ್, ಕಾರ್ಯದರ್ಶಿ ರಶ್ಮಿ ಮಹೇಶ್, ಜಿ.ಪಂ.ಸಿಇಒ ಆನಂದ್ ಪ್ರಕಾಶ್ ಮೀನಾ ಮತ್ತಿತರರು ಈ ಸಂದರ್ಭ ಹಾಜರಿದ್ದರು. ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಸ್ತುವಾರಿ ಸಚಿವರು, ಶಾಸಕರು ಮತ್ತಿತರರು ಪೊನ್ನಂಪೇಟೆ ತಾಲೂಕಿನ ಶ್ರೀಮಂಗಲ ಬಳಿ ಮಳೆಯಿಂದಾಗಿ ಕುಸಿದಿರುವ ರಾಜ್ಯ ಹೆದ್ದಾರಿಯನ್ನು ವೀಕ್ಷಿಸಿದರು.|

ಸ್ಥಳದಲ್ಲೇ ಪರಿಹಾರ ಸೂಚಿಸಿದ ಸಿಎಂ: ಸ್ಥಳೀಯರ ಜೊತೆ ಕೆಲಹೊತ್ತು ಚರ್ಚಿಸಿದ ಮುಖ್ಯಮಂತ್ರಿಯವರು ಅಲ್ಲಿನ 20 ಕುಟುಂಬಗಳ ಸಂಕಷ್ಟ ಆಲಿಸಿದರಲ್ಲದೆ, ಸ್ಥಳದಲ್ಲೇ ಅಧಿಕಾರಿಗಳ ಜೊತೆ ಚರ್ಚೆ ನಡೆಸಿ ಪರಿಹಾರ ಸೂಚಿಸಿದರು.

ಗುಡ್ಡ ಕುಸಿತದ ಪರಿಣಾಮ ಸುಮಾರು 20 ಕ್ಕೂ ಹೆಚ್ಚು ಕುಟುಂಬಗಳು ಸಂಪರ್ಕ ಕಳೆದುಕೊಂಡಿದ್ದು, ಇಲ್ಲಿ ತೂಗು ಸೇತುವೆ ನಿರ್ಮಿಸುವುದರ ಜೊತೆಗೆ ತುರ್ತಾಗಿ ರಸ್ತೆ ನಿರ್ಮಾಣ ಹಾಗೂ ಇತರ ದುರಸ್ತಿ ಕಾರ್ಯಗಳನ್ನು ಮುಗಿಸುವಂತೆ ನಿರ್ದೇಶನ ನೀಡಿದರು.
ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರು, ಗುಡ್ಡ ಕುಸಿತದ ಪರಿಣಾಮಗಳನ್ನು ಮತ್ತು ತೆಗೆದುಕೊಳ್ಳಲಾಗಿರುವ ಸುರಕ್ಷತಾ ಕ್ರಮಗಳು ಹಾಗೂ ಕಾಮಗಾರಿಗಳ ಬಗ್ಗೆ ಮುಖ್ಯಮಂತ್ರಿಗಳಿಗೆ ವಿವರಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!