ಹೊಸ ಆದಿಗಂತ ಡಿಜಿಟಲ್ ಡೆಸ್ಕ್:
ಹಣಕಾಸಿನ ವಿಷಯಗಳು ಅಥವಾ ಪರಸ್ಪರ ವ್ಯವಹಾರದ ಸಮಯದಲ್ಲಿ ಅನೇಕ ಬಾರಿ ಉದ್ಯಮಿಗಳು ಪೊಲೀಸರ ಕಿರುಕುಳಕ್ಕೆ ಗುರಿಯಾಗಬೇಕಾಗುತ್ತದೆ. ಕೆಲ ವೇಳೆ ಜನರು ಉದ್ಯಮಿಗಳ ವಿರುದ್ಧ ಸುಳ್ಳು ಎಫ್ಐಆರ್ ಗಳನ್ನು ದಾಖಲಿಸುತ್ತಾರೆ. ಇಂತಹ ವಿಷಯಗಳು ಸಿಎಂ ಯೋಗಿ ಆದಿತ್ಯನಾಥ್ ಗಮನಕ್ಕೆ ತಂದಿದ್ದು, ಹೀಗಾಗಿ ಸಿಎಂ ಯೋಗಿ ರಾಜ್ಯದ ವ್ಯಾಪಾರಿಗಳು ಮತ್ತು ಉದ್ಯಮಿಗಳ ವಿರುದ್ಧ ಯಾವುದೇ ಪ್ರಕರಣ ದಾಖಲಿಸುವ ಮೊದಲು ಪ್ರಾಥಮಿಕ ತನಿಖೆಯ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು ಎಂದು ಹೇಳಿದ್ದಾರೆ.
ಉದ್ಯಮಿಗಳಿಗೆ ಕಿರುಕುಳ ನೀಡುತ್ತಿರುವ ದೂರುಗಳು ಬಂದ ಹಿನ್ನೆಲೆಯಲ್ಲಿ ಯೋಗಿ ಆದಿತ್ಯನಾಥ್ ಅವರು ಈ ಸೂಚನೆ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ.
ರಾಜ್ಯದಲ್ಲಿ ಕೆಲವರು ಕೇವಲ ಕಿರುಕುಳ ನೀಡುವ ಉದ್ದೇಶದಿಂದಲೇ ವ್ಯಾಪಾರಿಗಳು ಮತ್ತು ಉದ್ಯಮಿಗಳ ವಿರುದ್ಧ ಎಫ್ಐಆರ್ ದಾಖಲಿಸುತ್ತಾರೆ. ಇದಾದ ನಂತರ ತನಿಖೆಯ ಹೆಸರಿನಲ್ಲಿ ಪೊಲೀಸರ ಕಡೆಯಿಂದ ಕಿರುಕುಳದ ಪ್ರಕ್ರಿಯೆ ಶುರುವಾಗುತ್ತದೆ.
ಈ ಬಗ್ಗೆ ಸಾಕಷ್ಟು ದೂರುಗಳನ್ನು ಸ್ವೀಕರಿಸಿದ ನಂತರ, ಈಗ ಯುಪಿ ಸರ್ಕಾರವು ಪ್ರಾಥಮಿಕ ತನಿಖೆಯನ್ನು ಕಡ್ಡಾಯಗೊಳಿಸಲು ಆದೇಶ ನೀಡಿದ್ದು, ಈ ಪ್ರಕ್ರಿಯೆಯ ನಂತರ ಸುಳ್ಳು ಎಫ್ಐಆರ್ ಗಳನ್ನು ದಾಖಲಿಸುವ ದೂರುಗಳು ಶೀಘ್ರ ಕಡಿಮೆಯಾಗಲಿವೆ. ಇದರಿಂದ ಪ್ರಾಮಾಣಿಕ ಉದ್ಯಮಿಗಳಿಗೆ ನೆಮ್ಮದಿ ಸಿಗಲಿದೆ.