ಹೊಸದಿಗಂತ ವರದಿ ವಿಜಯಪುರ:
ಆಲಮಟ್ಟಿ ಅಣೆಕಟ್ಟೆ ಎತ್ತರ ಕುರಿತು ಎರಡೂ ರಾಜ್ಯದ ಮುಖ್ಯಮಂತ್ರಿಗಳು ಹಾಗೂ ನೀರಾವರಿ ತಜ್ಞರನ್ನು ಕರೆದು ಚರ್ಚೆ ಮಾಡಬೇಕು. ಕರ್ನಾಟಕಕ್ಕೆ ಅನ್ಯಾಯವಾಗದ ಹಾಗೆ ನಡೆದುಕೊಳ್ಳಬೇಕು ಎಂದು ಬಸನಗೌಡ ಪಾಟೀಲ ಯತ್ನಾಳ್ ಹೇಳಿದರು.
ಆಲಮಟ್ಟಿ ಜಲಾಶಯದ ಎತ್ತರ ವಿಚಾರಕ್ಕೆ ನಗರದಲ್ಲಿ ಪ್ರತಿಕ್ರಿಯಿಸಿದ ಅವರು, ಬಚಾವತ್ ಹಾಗೂ ಬ್ರಿಜೇಶ್ ಕುಮಾರ ವರದಿಯ ಪ್ರಕಾರ, ಆಲಮಟ್ಟಿ ಜಲಾಶಯಕ್ಕೆ 524.256 ಮೀ ಎತ್ತರಕ್ಕೆ ಅನುಮತಿ ಸಿಕ್ಕಿದೆ ಎಂದರು.
ಮಹಾರಾಷ್ಟ್ರದವರು ಹೇಳುವ ಪ್ರಕಾರ ಸಾಂಗಲಿ ಜಿಲ್ಲೆಯ ಕೆಲ ಹಳ್ಳಿಯಲ್ಲಿ ನೀರು ನಿಲ್ಲುತ್ತದೆ. ಆದರೆ ಬಹುದೊಡ್ಡ ಸಮಸ್ಯೆ ಏನೂ ಇಲ್ಲ. ಮಹಾರಾಷ್ಟ್ರದವರು ಪ್ರಚೋದನೆ ಕೊಡಲು ಇಂತಹ ಹೇಳಿಕೆ ಕೊಡುತ್ತಾರೆ. ಇದಕ್ಕೆ ಕೇಂದ್ರ ಸರ್ಕಾರ ಕರ್ನಾಟಕಕ್ಕೆ ಅನ್ಯಾಯವಾಗದ ರೀತಿಯಲ್ಲಿ ನಡೆದುಕೊಳ್ಳಬೇಕು ಎಂದರು.
ಆಲಮಟ್ಟಿ ಜಲಾಶಯದ ಎತ್ತರದ ವಿಚಾರ ರಾಜ್ಯ ಸರ್ಕಾರ ಗಮನ ಹರಿಸಬೇಕು, ಇವರ ಗ್ಯಾರಂಟಿ ಯಾರಿಗೂ ಬೇಕಾಗಿಲ್ಲ ಎಂದರು.
ನಾನು ಕೂಡ ಹಿಂದೆ ವಾಜಪೇಯಿ ಅವರು ಪ್ರಧಾನಿಯಾಗಿದ್ದಾಗ, ಅಂದಿನ ಆಂಧ್ರ ಮುಖ್ಯಮಂತ್ರಿ ನಮ್ಮ ಚಂದ್ರಬಾಬು ನಾಯ್ಡು ನಮ್ಮ ವಾಜಪೇಯಿ ಸರ್ಕಾರಕ್ಕೆ ಬಹಳ ಬೆದರಿಕೆ ಹಾಕಿದ್ದರು. ಆಗ ನಾನು ಜಲಾಶಯ ಎತ್ತರದ ವಿಚಾರವಾಗಿ ಅನುಮತಿ ಕೊಡದಿದ್ದರೆ ನಾನು ಲೋಕಸಭಾ ಸ್ಥಾನಕ್ಕೆ ರಾಜೀನಾಮೆ ಕೊಡುತ್ತೇನೆ ಎಂದು ಹೇಳಿದ್ದೆ ಎಂದರು.
ನಾನು ಹೇಳಿದ ಮೇಲೆ ಸ್ವತಃ ವಾಜಪೇಯಿ ಅವರು ಹರೀಶ ಸಾಳ್ವೆ ಎಂಬುವವರಿಗೆ ನಮ್ಮ ಮನೆಗೆ ಕಳುಹಿಸಿದ್ದರು. ಆಗ ಅನಂತಕುಮಾರ, ಬಸವರಾಜ್ ಪಾಟೀಲ, ಜಗದೀಶ್ ಶೆಟ್ಟರ್, ಡಾ.ತಂಗಾ ಅವರು ಹೋಗಿ ಹರೀಶ್ ಸಾಳ್ವೆ ಅವರಿಗೆ ತಿಳಿ ಹೇಳಿದೆವು. ನಾವು ಕುರ್ಚಿ ಹೋದರು ಪರವಾಗಿಲ್ಲ 519 ಮೀಟರ್ ಆಗಬೇಕು ಎಂದೆವು, ಅದಕ್ಕೆ ಈಗ ಆಗಿದೆ. ಈಗಿನ ಸಂಸದರು ಸಹಿತ ಅದೇ ಕೆಲಸ ಮಾಡಬೇಕು ಎಂದರು.
ಅವರನ್ನು ಕರ್ನಾಟಕದ ಹಿತ ಕಾಪಾಡಲು ಜನ ಆಯ್ಕೆ ಮಾಡಿ ಕಳುಹಿಸಿದ್ದಾರೆ. ಮಾತಾಡುವುದಿಲ್ಲ ಎಂದರೆ ಜನ ಆಕ್ರೋಶ ಆಗುತ್ತಾರೆ, ಲೋಕಸಭೆಯಲ್ಲಿ ಈ ವಿಚಾರ ಮಾತಾಡಬೇಕು ಎಂದರು.
ಇಲ್ಲಿ ಕೆಲವೊಂದು ಲಪುಟರನ್ನು ಕರೆದುಕೊಂಡು ಪತ್ರಿಕಾಗೋಷ್ಠಿ ನಡೆಸಿದರೆ ಅದು ಉಪಯೋಗ ಆಗಲ್ಲ ಎಂದು ಅಪರೋಕ್ಷವಾಗಿ ಸಂಸದ ರಮೇಶ ಜಿಗಜಿಣಗಿ ವಿರುದ್ಧ ವಾಗ್ದಾಳಿ ನಡೆಸಿದರು.