ಸತತ 120 ಗಂಟೆ ಕಾಲ ಹೊಟ್ಟೆಗೆ ಅನ್ನವಿಲ್ಲದೆ ಪರದಾಡಿದ್ದರು ಇನ್ಫೋಸಿಸ್ ಸಹ ಸಂಸ್ಥಾಪಕ ನಾರಾಯಣಮೂರ್ತಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಜಗತ್ತಿನಲ್ಲಿ ಬಹಳಷ್ಟು ಜನರಿಗೆ ಹಸಿವಿನ ನರಕದ ದರ್ಶನವಾಗಿಲ್ಲ. ಆದರೆ ಯುರೋಪ್‌ನಲ್ಲಿ ಸತತ 120 ಗಂಟೆ ಕಾಲ ನನಗೆ ಅದರ ಅನುಭವವಾಗಿದೆ ಎಂದು ಹೇಳುವ ಮೂಲಕ ಐಟಿ ದಿಗ್ಗಜ ಇನ್ಫೋಸಿಸ್ ಸಹ ಸಂಸ್ಥಾಪಕ ಎನ್.ಆರ್.ನಾರಾಯಣಮೂರ್ತಿ ವಿಶ್ವವನ್ನೇ ದಂಗಾಗಿಸಿದ್ದಾರೆ!

ಅಕ್ಷಯ ಪಾತ್ರ ಫೌಂಡೇಶನ್ ನಾಲ್ಕು ಶತಕೋಟಿ ಊಟಗಳನ್ನು ನೀಡಿದ ಹೆಗ್ಗಳಿಕೆಗೆ ಪಾತ್ರವಾಗಿರುವ ಹಿನ್ನೆಲೆಯಲ್ಲಿ ವಿಶ್ವಸಂಸ್ಥೆಯಲ್ಲಿರುವ ಭಾರತ ಕಾಯಂ ಸಮಿತಿಯಿಂದ ’ಆಹಾರ ಭದ್ರತೆಯಲ್ಲಿನ ಸಾಧನೆಗಳು: ಸುಸ್ಥಿರ ಅಭಿವೃದ್ಧಿ ಗುರಿಗಳತ್ತ ಭಾರತದ ದಾಪುಗಾಲು’ ವಿಷಯ ಕುರಿತು ಆಯೋಜಿಸಿದ ಕಾರ್ಯಕ್ರಮದಲ್ಲಿ ಅವರು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ.

ಇದು ಸುಮಾರು ಐವತ್ತು ವರ್ಷಗಳ ಹಿಂದಿನ ಕಥೆ. ನಾನು ಬಲ್ಗೇರಿಯಾ, ಸರ್ಬಿಯಾ ಗಡಿಭಾಗದ ನಿಶ್ ಪಟ್ಟಣದಲ್ಲಿದ್ದೆ. ಅಲ್ಲಿನ ರಸ್ತೆಗಳಲ್ಲಿ ಸಂಚರಿಸುವಾಗ ಅಪರಿಚಿತ ವಾಹನಗಳ ಸಹಾಯ ಪಡೆದು ಪ್ರಯಾಣಿಸಿದ್ದೆ. ಈ ವೇಳೆ ನಾನು ಹಸಿವಿಂದಲೇ ದಿನಗಟ್ಟಲೆ ಬಳಲಿದ್ದೇನೆ ಎಂದು ಅವರು ನೆನಪಿಸಿಕೊಂಡರು.

ಹಸಿದ ಹೊಟ್ಟೆಗೆ ಅನ್ನ ನೀಡುವ ಅಕ್ಷಯ ಪಾತ್ರ ಫೌಂಡೇಶನ್ ಕಾರ್ಯ ಶ್ಲಾಘನೀಯವಾದುದು. ಇಲ್ಲಿರುವ ಭಾರತೀಯರಿಂದ ಹಾಗೂ ಭಾರತ ಸರ್ಕಾರದಿಂದ ನನಗೆ ಉತ್ತಮ ಗುಣಮಟ್ಟದ ಶಿಕ್ಷಣ ಸಿಕ್ಕಿದೆ. ಹಾಗಾಗಿ, ದೇಶಕ್ಕೆ ನಾವು ಕೃತಜ್ಞತೆ ಸಲ್ಲಿಸಬೇಕಿದೆ. ಅನಾಥ, ಬಡಮಕ್ಕಳು ಗುಣಮಟ್ಟದ ಶಿಕ್ಷಣ ಪಡೆಯಲು ನಾವೆಲ್ಲರೂ ಸಹಾಯಹಸ್ತ ಚಾಚಬೇಕಿದೆ ಎಂದು ಅವರು ಸಲಹೆ ನೀಡಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!