ಹೊಸದಿಗಂತ ಡಿಜಿಟಲ್ ಡೆಸ್ಕ್:
ಸತ್ಯಾಗ್ರಹ ಎಕ್ಸ್ಪ್ರೆಸ್ ರೈಲಿನ ಐದು ಬೋಗಿಗಳು ಇಂಜಿನ್ನಿಂದ ಬೇರ್ಪಟ್ಟ ಘಟನೆ ಇಂದು ಬಿಹಾರದ ಬೆಟ್ಟಿಯ ಮಜೌಲಿಯಾ ನಿಲ್ದಾಣದ ಬಳಿ ನಡೆದಿದೆ.
ಮುಜಾಫರ್ಪುರ-ನರ್ಕಟಿಯಾಗಂಜ್ ರೈಲ್ವೆ ವಿಭಾಗದಲ್ಲಿ ಈ ಘಟನೆ ನಡೆದಿದ್ದು, ಅದೃಷ್ಟವಶಾತ್ ಯಾವುದೇ ಪ್ರಯಾಣಿಕರಿಗೆ ಗಾಯಗಳಾಗಿಲ್ಲ.
ಬಿಹಾರದ ರಕ್ಸಾಲ್ ಜಿಲ್ಲೆಯಿಂದ ದೆಹಲಿಗೆ ಚಲಿಸುವ ರೈಲಿನ ಬೋಗಿಗಳನ್ನು ಮರು ಜೋಡಿಸಿದ್ದಾರೆ. ಈ ಬಗ್ಗೆ ಪೂರ್ವ ಕೇಂದ್ರ ರೈಲ್ವೆ ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ.
ವರದಿಯ ಪ್ರಕಾರ, ಎರಡು ಬೋಗಿಗಳನ್ನು ಒಟ್ಟಿಗೆ ಜೋಡಿಸಲು ಬಳಸುವ ಕಪ್ಲಿಂಗ್ನ ಅಸಮರ್ಪಕ ಕಾರ್ಯದಿಂದಾಗಿ, ಬೋಗಿಗಳು ಎಂಜಿನ್ನಿಂದ ಬೇರ್ಪಟ್ಟಿವೆ. ನಂತರ ಎಂಜಿನ್ ಹಲವು ಕಿಲೋಮೀಟರ್ ದೂರ ಸಾಗಿದೆ. ಆದರೆ, ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ ಎಂದು ರೈಲ್ವೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.