ಹೊಸದಿಗಂತ ಡಿಜಿಟಲ್ ಡೆಸ್ಕ್:
ಶ್ರೀಲಂಕಾದಿಂದ ಭಾರತವನ್ನರಿಸಿ ಬಂದ ಎಂಟು ಜನರನ್ನು ಕೋಸ್ಟ್ ಗಾರ್ಡ್ ಅಧಿಕಾರಿಗಳು ರಾಮೇಶ್ವರಂ ಬಳಿಯ ಪುಟ್ಟ ದ್ವೀಪದಿಂದ ರಕ್ಷಿಸಿದ್ದಾರೆ. ಎಂಟು ಮಂದಿಯಲ್ಲಿ ಎರಡು ತಿಂಗಳ ಪುಟ್ಟ ಮಗುವೂ ಸೇರಿದೆ. ಶ್ರೀಲಂಕಾದಲ್ಲಿ ಬದುಕಲು ಸಾಧ್ಯವಿಲ್ಲವೆಂದು ಭಾರತದ ಆಶ್ರಯ ಕೇಳಿಕೊಂಡು ಅವರು ದೋಣಿಯೊಂದರಲ್ಲಿ ಆಗಮಿಸಿದ್ದಾರೆ. ಎಂಟು ಜನರಲ್ಲಿ ಆರು ಮಂದಿ ಜಾಫ್ನಾದಿಂದ ಹಾಗೂ ಇಬ್ಬರು ಕಿಲಿನೊಚ್ಚಿಯಿಂದ ಬಂದಿದ್ದಾರೆ.
ಆಹಾರವಿಲ್ಲದೇ ಕೇವಲ ನೀರು ಕುಡಿದು ಬದುಕುಳಿದಿದ್ದರು ಎಂಬುದು ರಕ್ಷಣಾಕಾರ್ಯದ ವೇಳೆ ತಿಳಿದುಬಂದಿದೆ. ಧನುಷ್ಕೋಟಿಯ ಪುಟ್ಟ ಮರಳು ದ್ವೀಪಕ್ಕೆ ಬಂದಿಳಿದ ಅವರನ್ನು ಸಾಗರ ಸುರಕ್ಷಾ ಪಡೆಗಳು ಹೋವರ್‌ಕ್ರಾಫ್ಟ್ ಬಳಸಿ ರಕ್ಷಿಸಿ ರಾಮೇಶ್ವರಂಗೆ ಕರೆತಂದಿದ್ದು ವಿಚಾರಣೆಯ ನಂತರ ಮಂಡಪಂ ಶಿಬಿರಕ್ಕೆ ಕಳುಹಿಸಲಾಗಿದೆ.