ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಮುದ್ರದ ನಡುವೆ ನೀರಿನಲ್ಲಿ ಬಿದ್ದ ವ್ಯಕ್ತಿಯನ್ನು ರಕ್ಷಿಸಿದ ಕೋರ್ಸ್ಟ್ ಗಾರ್ಡ್ ಹೆಲಿಕಾಪ್ಟರ್… ಹಡಗಿನಲ್ಲಿ ಕಾಣಿಸಿಕೊಂಡ ಬೆಂಕಿ ನಂದಿಸಿದ ಐಸಿಜಿಎಸ್ ವಿಕ್ರಮ್ ನೌಕೆ… ಹಡಗಿನಲ್ಲಿ ಕಡಲುಗಳ್ಳರ ಪತ್ತೆ, ವಶ ಕಾರ್ಯಾಚರಣೆ…ಗುಂಡು ಹಾರಾಟದ ಪರಿಸ್ಥಿತಿ ನಿಭಾಯಿಸಿದ ಕೋರ್ಸ್ಟ್ ಗಾರ್ಡ್‌ನ ಹೆಲಿಕಾಪ್ಟರ್ ಹಾಗೂ ನೌಕೆಗಳು..
೪೮ನೇ ಭಾರತೀಯ ಕೋಸ್ಟ್ ಗಾರ್ಡ್ ದಿನಾಚರಣೆ ಅಂಗವಾಗಿ ಮಂಗಳೂರಿನ ಅರಬ್ಬಿ ಸಮುದ್ರ ಮಧ್ಯೆ ಶುಕ್ರವಾರ ಐಸಿಜಿಎಸ್ ವಿಕ್ರಮ್ ನೌಕೆ ನೇತೃತ್ವದಲ್ಲಿ ಕೋರ್ಸ್ಟ್ ಗಾರ್ಡ್ ಸಿಬ್ಬಂದಿ ವಿವಿಧ ಪ್ರಾತ್ಯಕ್ಷಿಕೆ, ಕಸರತ್ತುಗಳನ್ನು ಪ್ರದರ್ಶಿಸಿದರು.
ಕಡಲ ನಡುವೆ ನಡೆದ ಈ ರೋಚಕ ಸನ್ನಿವೇಶಕ್ಕೆ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಸಾಕ್ಷಿಯಾದರು.
ವಿಕ್ರಮ್ ನೌಕೆಯಲ್ಲಿ ವಿಹರಿಸಿದ ರಾಜ್ಯಪಾಲರು ಭಾರತೀಯ ಕೋರ್ಸ್ಟ್ ಗಾರ್ಡ್‌ನ ಸಾಮರ್ಥ್ಯ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.
ಮಂಗಳೂರು ಪಣಂಬೂರು ಸಮುದ್ರ ತಟದಿಂದ ೧೫ ನಾಟಿಕಲ್ ಮೈಲ್ ದೂರದವರೆಗೆ ಸಾಗಿದ ವಿಕ್ರಮ್ ನೌಕೆಯನ್ನು ಕೇಂದ್ರವಾಗಿರಿಸಿ ಮೂರು ಹೆಲಿಕಾಪ್ಟರ್, ಉಳಿದ ನೌಕೆಗಳು ಈ ಕಸರತ್ತುಗಳನ್ನು ಪ್ರದರ್ಶಿಸಿದವು. ಸಮುದ್ರದ ಮಧ್ಯೆ ಕೋಸ್ಟ್ ಗಾರ್ಡ್ ತನ್ನ ಅತ್ಯಾಧುನಿಕ ತಂತ್ರಜ್ಞಾನ, ವ್ಯವಸ್ಥೆಗಳೊಂದಿಗೆ ನಿರ್ವಹಿಸುವ ಸಾಹಸಮಯ ರಕ್ಷಣಾ ಕಾರ್ಯಾಚರಣೆಯ ಅಣುಕು ಪ್ರದರ್ಶನ ರೋಮಾಂಚಕಾರಿಯಾಗಿತ್ತು.
ಬೆಳಗ್ಗೆ ೧೧ ರಿಂದ ಮಧ್ಯಾಹ್ನ ೧.೩೦ರವರೆಗೆ ನಡೆದ ಕೋಸ್ಟ್‌ಗಾರ್ಡ್‌ನ ಈ ವಿವಿಧ ರೀತಿಯ ರಕ್ಷಣಾ ಅಣುಕು ಕಾರ್ಯಾಚರಣೆಯಲ್ಲಿ ೨ ಇಂಟರ್ ಸೆಪ್ಟರ್, ಒಂದು ಅತ್ಯಾಧುನಿಕ ಹೆಲಿಕಾಪ್ಟರ್, ೬ ಹಡಗುಗಳು, ಒಂದು ಕಡಲಾಚೆಯ ಗಸ್ತು ಹಡಗು, ೩ ವೇಗದ ಗಸ್ತು ನೌಕೆಗಳು ತಮ್ಮ ಕಾರ್ಯಕ್ಷಮತೆ ಪ್ರದರ್ಶಿಸಿದವು.
೨೦೧೮ರಿಂದ ಮಂಗಳೂರು ಕೇಂದ್ರವಾಗಿರಿಸಿ ಕಡಲಿನಲ್ಲಿ ಕೋಸ್ಟ್‌ಗಾರ್ಡ್‌ನ ಕಡಲಾಚೆಯ ಗಸ್ತು ಹಡಗಾಗಿ ಕಾರ್ಯಾಚರಿಸುತ್ತಿರುವ ‘ವಿಕ್ರಮ್’ನೊಳಗೆ ಬೆಳಗ್ಗೆ ೧೦.೩೦ರ ವೇಳೆಗೆ ಪ್ರವೇಶಿಸಿದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರನ್ನು ಕೋಸ್ಟ್‌ಗಾರ್ಡ್ ವತಿಯಿಂದ ಗೌರವದೊಂದಿಗೆ ಸ್ವಾಗತಿಸಲಾಯಿತು.
ಕರ್ನಾಟಕ ಕೋಸ್ಟ್ ಗಾರ್ಡ್ ಕಮಾಂಡರ್ ಪ್ರವೀಣ್ ಕುಮಾರ್ ಮಿಶ್ರಾ, ಕಮಾಂಡಿಂಗ್ ಅಫೀಸರ್ ಡಿಐಜಿ ಅಶೋಕ್ ಕುಮಾರ್ ಭಾಮ, ದ.ಕ. ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ಪೊಲೀಸ್ ಆಯುಕ್ತ ಅನುಪಮ್ ಅಗರ್‌ವಾಲ್, ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಆನಂದ್, ಕೋಸ್ಟ್‌ಗಾರ್ಡ್ ಅಧಿಕಾರಿ- ಸಿಬ್ಬಂದಿ, ಕೆಲ ಪ್ರವಾಸಿಗರು ಸೇರಿದಂತೆ ಸುಮಾರು ೨೦೦ಕ್ಕೂ ಅಧಿಕ ಮಂದಿ ಭಾಗವಹಿಸಿದ್ದರು.
ಕೋಸ್ಟ್‌ಗಾರ್ಡ್‌ನ ರಕ್ಷಣಾ ಅಣಕು ಕಾರ್ಯಾಚರಣೆಯ ಭಾಗವಾಗಿ ಸಮುದ್ರ ಮಧ್ಯೆ ಹಡಗಿಗೆ ಬೆಂಕಿ ಬಿದ್ದಾಗ ಅದನ್ನು ವಿಕ್ರಮ್‌ನಲ್ಲಿದ್ದ ಬೃಹತ್ ನೀರಿನ ಕೊಳವೆಯಿಂದ ನೀರು ಹಾಯಿಸಿ ನಂದಿಸುವುದು ಹಾಗೂ ಸಮುದ್ರದಲ್ಲಿ ಕಡಲ್ಗಳ್ಳರ ಹಡಗನ್ನು ಪತ್ತೆ ಹಚ್ಚಿ ವಶಕ್ಕೆ ಪಡೆಯುವ ವೇಳೆ ಕೋಸ್ಟ್‌ಗಾರ್ಡ್ ರಕ್ಷಣಾ ಹಡಗಿನಿಂದ ಕೆಂಪು, ಹಸಿರು ಬಣ್ಣದ ಗುಂಡು ಹಾರಾಟ, ನೀರಿನಲ್ಲಿ ಮುಳುಗೇಳುತ್ತಾ ಅಪಾಯದಲ್ಲಿ ಸಿಲುಕಿದ್ದ ನಾವಿಕರ ರಕ್ಷಣೆಗಾಗಿ ಆಗಸದಲ್ಲಿ ಅತ್ತಿತ್ತ ಹಾರಾಡುತ್ತಾ ರಕ್ಷಣೆಗೆ ಧಾವಿಸಿದ ಹೆಲಿಕಾಪ್ಟರ್‌ನ ಸಾಹಸಮಯ ದೃಶ್ಯವನ್ನು ನೌಕೆಯಲ್ಲಿದ್ದವರು ತದೇಕಚಿತ್ತದಿಂದ ಕಣ್ತುಂಬಿಕೊಂಡರು.
ಕಳೆದ ೩೦ ವರ್ಷಗಳಿಂದ ಕೋಸ್ಟ್‌ಗಾರ್ಡ್‌ನಲ್ಲಿ ಸೇವೆಯಲ್ಲಿದ್ದು, ಪಾರದೀಪ್, ವಿಶಾಖಪಟ್ಟಣಂ ಮೊದಲಾದ ಕಡೆ ಸೇವೆ ಸಲ್ಲಿಸಿ ಇದೀಗ ಕರ್ನಾಟಕ- ಮಂಗಳೂರು ವಿಭಾಗದಲ್ಲಿದ್ದೇನೆ. ಮುಂದೆ ಗೋವಾಕ್ಕೆ ಹೋಗಲಿದ್ದೇನೆ. ಕೋಸ್ಟ್‌ಗಾರ್ಡ್‌ನಲ್ಲಿ ಕಾರ್ಯ ನಿರ್ವಹಿಸುವುದೆಂದರೆ ಅದೊಂದು ಸಾಹಸಮಯ ಅನುಭವ ಮಾತ್ರವಲ್ಲದೆ ಪ್ರಕೃತಿಯೊಂದಿಗಿನ ಒಡನಾಟ ಎಂದು ಕೋಸ್ಟ್‌ಗಾರ್ಡ್‌ನಲ್ಲಿ ಇನ್ಸ್‌ಪೆಕ್ಟರ್ ದರ್ಜೆಯ ಪ್ರಧಾನ ಅಕಾರಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಬಿಹಾರ ಮೂಲದ ಅಧಿಕಾರಿಯೊಬ್ಬರು ಹೇಳಿದರು.