ಹೊಸದಿಗಂತ ಡಿಜಿಟಲ್ ಡೆಸ್ಕ್:
ಹೊಸ ವರ್ಷ 2026ರ ಸಂಭ್ರಮಕ್ಕೆ ಕಾಫಿನಾಡು ಸಕಲ ಸಿದ್ಧತೆಯೊಂದಿಗೆ ಪ್ರವಾಸಿಗರನ್ನು ಬರಮಾಡಿಕೊಳ್ಳುತ್ತಿದೆ. ವರ್ಷದ ಕೊನೆಯ ವೀಕೆಂಡ್ ಆರಂಭವಾಗುತ್ತಿದ್ದಂತೆ ಚಿಕ್ಕಮಗಳೂರು ಜಿಲ್ಲೆ ಪ್ರವಾಸಿಗರಿಂದ ಕಿಕ್ಕಿರಿದು ಹೋಗಿದ್ದು, ಪ್ರಕೃತಿ ಮಡಿಲಲ್ಲಿ ಹೊಸ ವರ್ಷ ಆಚರಿಸಲು ಸಾವಿರಾರು ಮಂದಿ ಈಗಾಗಲೇ ಆಗಮಿಸಿದ್ದಾರೆ.
ಮುಳ್ಳಯ್ಯನಗಿರಿ, ಬಾಬಾಬುಡನ್ಗಿರಿ, ಸೀತಾಳಯ್ಯನಗಿರಿ, ಶೃಂಗೇರಿ, ಹೊರನಾಡು ಹಾಗೂ ಕುದುರೆಮುಖ ಸೇರಿದಂತೆ ಪ್ರಮುಖ ಪ್ರವಾಸಿ ತಾಣಗಳಲ್ಲಿ ಭಾರೀ ಜನಸಂದಣಿ ಕಂಡುಬರುತ್ತಿದೆ. ಬೆಟ್ಟಗುಡ್ಡಗಳ ನಡುವೆ ಹರಿದುಬರುವ ಮೋಡಗಳು, ತಂಪಾದ ವಾತಾವರಣ ಮತ್ತು ಹಸಿರಿನ ಸೌಂದರ್ಯ ಪ್ರವಾಸಿಗರನ್ನು ಮನಸೂರೆಗೊಳಿಸುತ್ತಿದೆ. ಶನಿವಾರ–ಭಾನುವಾರ ದೇವಾಲಯ ದರ್ಶನ ಪಡೆದ ಪ್ರವಾಸಿಗರು, ಸೋಮವಾರ ಮತ್ತು ಮಂಗಳವಾರ ಹೊಸ ವರ್ಷದ ಆಚರಣೆಗೆ ಸಿದ್ಧತೆ ನಡೆಸುತ್ತಿದ್ದಾರೆ.
ಹೋಂಸ್ಟೇ, ರೆಸಾರ್ಟ್, ಲಾಡ್ಜ್ ಮತ್ತು ಹೋಟೆಲ್ಗಳ ಬಹುತೇಕ ಕೊಠಡಿಗಳು ಈಗಾಗಲೇ ಬುಕ್ ಆಗಿದ್ದು, ಉಳಿದ ಸ್ಥಳಗಳಿಗೆ ದುಬಾರಿ ದರ ಕೇಳಲಾಗುತ್ತಿದೆ. ಇದರಿಂದಾಗಿ ಕೆಲ ಪ್ರವಾಸಿಗರು ಹೆಚ್ಚುವರಿ ಹಣ ಕೊಟ್ಟು ತಂಗುವಂತಾಗಿದೆ. ವಾಹನಗಳ ಸಂಖ್ಯೆಯೂ ಹೆಚ್ಚಿರುವುದರಿಂದ ಸಂಚಾರ ನಿಯಂತ್ರಣಕ್ಕೆ ಪೊಲೀಸರು ಹರಸಾಹಸ ಪಡುತ್ತಿದ್ದಾರೆ.
ಈ ನಡುವೆ ಡಿಜೆ ಪಾರ್ಟಿ, ವಿಶೇಷ ಭೋಜನ ವ್ಯವಸ್ಥೆಗಳಿಗೆ ಪ್ರವಾಸಿ ವಸತಿ ಕೇಂದ್ರಗಳು ಸಜ್ಜಾಗಿವೆ. ಆದರೆ ಪರಿಸರವಾದಿಗಳು ಪ್ರವಾಸಿಗರು ಪ್ರಕೃತಿ ಸೌಂದರ್ಯವನ್ನು ಕಾಪಾಡಿಕೊಳ್ಳುವಂತೆ ಮನವಿ ಮಾಡಿದ್ದು, ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.

