ಹೊಸದಿಗಂತ ವರದಿ, ಮೈಸೂರು:
ನಗರದ ಟೌನ್ ಹಾಲ್‌ನಲ್ಲಿ ಅ.13 ರಂದು ನಡೆದ ಮಹಿಷ ಉತ್ಸವ ಕಾರ್ಯಕ್ರಮದಲ್ಲಿ ಒಕ್ಕಲಿಗರು ಸಂಸ್ಕೃತಿ ಹೀನ ಪಶುಗಳು ಎಂದು ಹೇಳಿರುವ ಪ್ರೊ. ಕೆ.ಎಸ್.ಭಗವಾನ್‌ರಿಗೆ ನಾಡ ಹಬ್ಬ ದಸರಾದ ಕವಿಗೋಷ್ಠಿಯಿಂದ ಕೊಕ್ ನೀಡಲಾಗಿದೆ.
ಪ್ರೊ. ಕೆ.ಎಸ್.ಭಗವಾನ್ ನೀಡಿರುವ ಹೇಳಿಕೆ ಇದೀಗ ರಾಜ್ಯದಲ್ಲಿ ಕಿಡಿ ಹೊತ್ತಿಸಿದೆ. ಅವರ ಈ ಮಾತಿಗೆ ಒಕ್ಕಲಿಗ ಸಮುದಾಯ ರೊಚ್ಚಿಗೆದ್ದಿದೆ. ಅಲ್ಲದೇ ರಾಜ್ಯ ಒಕ್ಕಲಿಗರ ಪಡೆಯ ಪ್ರತಿಭಟನೆ ಎಚ್ಚರಿಕೆಗೆ ದಸರಾ ಕವಿಗೋಷ್ಠಿ ಉಪ ಸಮಿತಿ ಮಣಿದಿದ್ದು, ದಸರಾ ಯುವಕವಿಗೋಷ್ಠಿ ಉದ್ಘಾಟನೆಯಿಂದ ಪ್ರೊ ಭಗವಾನ್‌ಗೆ ಕೊಕ್ ನೀಡಲಾಗಿದೆ.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಸ್ಪಂದನ ಸಾಂಸ್ಕೃತಿಕ ಪರಿಷತ್ತಿನ ವತಿಯಿಂದ ವಿಜಯನಗರದ ಜಿಲ್ಲಾ ಕನ್ನಡ ಸಾಹಿತ್ಯ ಭವನದಲ್ಲಿ ನಾಳೆ ಅಕ್ಟೋಬರ್ 16 ರಂದು ಬೆಳಗ್ಗೆ 10 ಗಂಟೆಗೆ ನಡೆಯಲಿರುವ ‘ದಸರಾ ಯುವ ಕವಿಗೋಷ್ಠಿ’ಯ ಉದ್ಘಾಟನೆಯನ್ನು ಖ್ಯಾತ ಸಾಹಿತಿ ಮತ್ತು ವಿಚಾರವಾದಿ ಪ್ರೊ. ಕೆ.ಎಸ್. ಭಗವಾನ್ ಅವರ ಬದಲಿಗೆ ಮೈಸೂರು ವಿಶ್ವವಿದ್ಯಾನಿಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ವಿಶ್ರಾಂತ ನಿರ್ದೇಶಕ ಹಾಗೂ ಖ್ಯಾತ ಸಾಹಿತಿ ಡಾ. ಡಿ.ಕೆ. ರಾಜೇಂದ್ರ ಉದ್ಘಾಟಿಸಲಿದ್ದಾರೆ.
ಒಕ್ಕಲಿಗ ಸಮುದಾಯದ ಕುರಿತು ಅವಹೇಳನ ಮಾಡಿದ ಕಾರಣ ಸೋಮವಾರ ನಡೆಯಲಿರುವ ದಸರಾ ಯುವ ಕವಿಗೋಷ್ಠಿಯ ಉದ್ಘಾಟನೆಗೆ ಆಗಮಿಸಲಿರುವ ಪ್ರೊ. ಕೆ.ಎಸ್. ಭಗವಾನ್ ಅವರ ವಿರುದ್ಧ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಭವನಕ್ಕೆ ಮುತ್ತಿಗೆ ಹಾಕಿ ಪ್ರತಿಭಟಿಸುವ ನಿರ್ಧಾರವನ್ನು ಒಕ್ಕಲಿಗ ಸಂಘ, ಸಂಸ್ಥೆಗಳು ಕೈಗೊಂಡಿದ್ದವು.
ವಿಶ್ವ ವಿಖ್ಯಾತ ದಸರಾ ಅಂಗವಾಗಿ ನಡೆಯುತ್ತಿರುವ ದಸರಾ ಯುವ ಕವಿಗೋಷ್ಠಿಯನ್ನು ಯಾವುದೇ ಚ್ಯುತಿ ಬಾರದಂತೆ ನಡೆಸುವ ಆಶಯ, ಪ್ರೊ. ಭಗವಾನ್ ಅವರ ಸುರಕ್ಷತೆ ಮತ್ತು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಂಗಳದಲ್ಲಿ ಯಾವುದೇ ಅಹಿತಕರ ಘಟನೆ ನಡೆಯಬಾರದೆಂಬ ಸದಾಶಯ ಮತ್ತು ಸಾಹಿತ್ಯ ವಲಯದ ಸೌಹಾರ್ದ ವಾತಾವರಣದ ರಕ್ಷಣೆ, ಸಾಮಾಜಿಕ ಸಾಮರಸ್ಯದ ಹಿತದೃಷ್ಟಿಯಿಂದ ಪ್ರೊ.ಕೆ.ಎಸ್. ಭಗವಾನ್ ಅವರ ನಿವಾಸಕ್ಕೆ ಇಂದು ತೆರಳಿ, ಅವರ ಜೊತೆ ಚರ್ಚೆ ಮಾಡಿ, ಬಿಗುವಿನ ಪರಿಸ್ಥಿತಿ ಮನವರಿಕೆ ಮಾಡಿಕೊಟ್ಟು, ಉದ್ಘಾಟಕರ ಬದಲಾಯಿಸಲಾಗಿದೆ.
ಜಿಲ್ಲಾ ಕಸಾಪ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್ ಸಹ ಪ್ರೊ. ಭಗವಾನ್ ಜೊತೆಗೆ ಈ ನಿರ್ಧಾರಕ್ಕೆ ಸಹಮತ ವ್ಯಕ್ತಪಡಿಸಿದ್ದರಿಂದ ಉತ್ತಮ ಸಾಹಿತ್ಯ ವಾತಾವರಣ ಮತ್ತು ಸೌಹಾರ್ದತೆಯ ಆಶಯದ ಹಿನ್ನೆಲೆಯಲ್ಲಿ, ಒಕ್ಕಲಿಗ ಸಂಘಟನೆಗಳ ಮನವಿಯ ಮೇರೆಗೆ ಪ್ರೊ. ಭಗವಾನ್‌ರ ಸ್ನೇಹಿತರೂ ಹಿರಿಯ ವಿದ್ವಾಂಸರೂ ಆದ ಪ್ರೊ.ಡಿ.ಕೆ. ರಾಜೇಂದ್ರ ದಸರಾ ಯುವ ಕವಿಗೋಷ್ಠಿಯನ್ನು ಸಂತಸದಿoದ ಉದ್ಘಾಟಿಸಲು ಒಪ್ಪಿದ್ದಾರೆ.