ಹೊಸದಿಗಂತ ಡಿಜಿಟಲ್ ಡೆಸ್ಕ್:
ಜೈಲಿನಿಂದ ಬಿಡುಗಡೆಯಾಗುವ ಕೆಲವೇ ಗಂಟೆಗಳ ಮೊದಲು ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ಗೆ ದೆಹಲಿ ಹೈಕೋರ್ಟ್ ಭರ್ಜರಿ ಶಾಕ್ ನೀಡಿದೆ!
ಅಬಕಾರಿ ನೀತಿ ಸಂಬಂಧಿಸಿದ ಭ್ರಷ್ಟಾಚಾರ ಆರೋಪ ಎದುರಿಸುತ್ತಿರುವ ಕೇಜ್ರಿವಾಲ್‌ಗೆ ಜಾರಿ ನಿರ್ದೇಶನಾಲಯದ ಅರ್ಜಿಯ ವಿಚಾರಣೆಯ ತನಕ ಬಿಡುಗಡೆ ಇಲ್ಲ ಎಂದು ಹೇಳಿರುವ ದೆಹಲಿ ಹೈಕೋರ್ಟ್, ಬಿಡುಗಡೆ ಆದೇಶವನ್ನು ತಡೆಹಿಡಿದಿದೆ. ಕೇಜ್ರಿವಾಲ್ ಅವರ ಜಾಮೀನನ್ನು ಇಡಿ ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದು, ಕೇಜ್ರಿವಾಲ್ ತಿಹಾರ್ ಜೈಲಿನಿಂದ ಹೊರಬರಬೇಕಿದ್ದ ಕೆಲವೇ ಗಂಟೆಗಳ ಮೊದಲು ಈ ಬೆಳವಣಿಗೆ ನಡೆದಿದೆ.
ಗುರುವಾರ ದೆಹಲಿಯ ರೋಸ್ ಅವೆನ್ಯೂ ನ್ಯಾಯಾಲಯ ಜಾಮೀನು ಮಂಜೂರು ಮಾಡಿದ್ದ ಹಿನ್ನೆಲೆಯಲ್ಲಿ ಕೇಜ್ರಿವಾಲ್ ಶುಕ್ರವಾರ ಜೈಲಿನಿಂದ ಬಿಡುಗಡೆಯಾಗುವ ನಿರೀಕ್ಷೆಯಲ್ಲಿದ್ದರು. ನ್ಯಾಯಮೂರ್ತಿಗಳಾದ ಸುಧೀರ್ ಕುಮಾರ್ ಜೈನ್, ರವೀಂದರ್ ದುಡೇಜಾ ಅವರ ಪೀಠದ ಮುಂದೆ ಇಡಿ ತುರ್ತು ವಿಚಾರಣೆಗಾಗಿ ವಿಚಾರಣಾ ನ್ಯಾಯಾಲಯದ ಆದೇಶ ಪ್ರಶ್ನಿಸಿ ತನ್ನ ಅರ್ಜಿ ಉಲ್ಲೇಖಿಸಿದ್ದು, ಪ್ರಕರಣದ ಅರ್ಜಿ 10-15 ನಿಮಿಷಗಳಲ್ಲಿ ತನಗೆ ಬರಲಿದೆ, ನಂತರ ವಿಷಯವನ್ನು ಆಲಿಸುವುದಾಗಿ ಹೇಳಿದೆ. ಅಲ್ಲಿಯವರೆಗೂ ವಿಚಾರಣಾ ನ್ಯಾಯಾಲಯದ ಆದೇಶದ ಪ್ರಕಾರ ಕ್ರಮಕೈಗೊಳ್ಳುವುದಿಲ್ಲ ಎಂದೂ ಹೈಕೋರ್ಟ್ ಹೇಳಿದೆ.