ಕರ್ನಾಟಕದಲ್ಲಿ 3 ದಿನ ಶೀತಗಾಳಿ: ಹವಾಮಾನ ಇಲಾಖೆ ಮುನ್ಸೂಚನೆ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದ ಬೆನ್ನಲ್ಲೇ ಇತ್ತ ಕರ್ನಾಟಕ ರಾಜ್ಯದಲ್ಲಿ ತಾಪಮಾನ ಕುಸಿತವಾಗಿದ್ದು, ಮುಂದಿನ 3 ದಿನಗಳ ಕಾಲ ಶೀತಗಾಳಿ ಬೀಸುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಬುಧವಾರ ಎಚ್ಚರಿಕೆ ನೀಡಿದೆ.

ರಾಜ್ಯದಲ್ಲಿ ತಾಪಮಾನ ಗಣನೀಯವಾಗಿ ಕುಸಿತವಾಗಿದ್ದು, ಮುಂದಿನ ದಿನಗಳಲ್ಲಿ ತಾಪಮಾನ 2 ರಿಂದ 4 ಡಿಗ್ರಿಗಳ ವರೆಗೂ ಕುಸಿಯುವ ಸಾಧ್ಯತೆ ಇದೆ. ಮುಂದಿನ 3 ದಿನ ಶೀತಗಾಳಿ ಬೀಸುವ ಸಾಧ್ಯತೆ ಇದ್ದು, ಮುಂದಿನ ಮೂರು ದಿನಗಳವರೆಗೆ ಉತ್ತರ ಒಳನಾಡಿನ ಉಳಿದ ಜಿಲ್ಲೆಗಳಲ್ಲಿ ತಾಪಮಾನವು 2-4 ಡಿಗ್ರಿ ಸೆಲ್ಸಿಯಸ್ “ಸಾಮಾನ್ಯಕ್ಕಿಂತ ಕಡಿಮೆ ಇರಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಬುಧವಾರ ತಿಳಿಸಿದೆ.

ರಾಜ್ಯದ ಬೀದರ್, ವಿಜಯಪುರ ಮತ್ತು ಕಲಬುರಗಿ ಜಿಲ್ಲೆಗಳಲ್ಲಿ ಶೀತಗಾಳಿ ಮುಂದುವರಿಯುವ ಸಾಧ್ಯತೆ ಇದ್ದು, ಡಿಸೆಂಬರ್ 18-22 ರವರೆಗೆ ರಾಜ್ಯಾದ್ಯಂತ ಶುಷ್ಕ ಹವಾಮಾನ ಮುಂದುವರಿಯುವ ಮುನ್ಸೂಚನೆ ಇದೆ.

ಉತ್ತರ ಒಳನಾಡಿನ ಕರ್ನಾಟಕದ ಉಳಿದ ಜಿಲ್ಲೆಗಳಲ್ಲಿ ತಾಪಮಾನವು ಸಾಮಾನ್ಯಕ್ಕಿಂತ 2-4 ಡಿಗ್ರಿ ಸೆಲ್ಸಿಯಸ್ ಕಡಿಮೆ ಇರುತ್ತದೆ. ಕರ್ನಾಟಕದ ಒಳನಾಡಿನ ಪ್ರತ್ಯೇಕ ಸ್ಥಳಗಳಲ್ಲಿ ಡಿಸೆಂಬರ್ 20 ರವರೆಗೆ ಮಂಜು ಆವರಿಸಬಹುದು ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ಇನ್ನು ಮುಂದಿನ ಮೂರ್ನಾಲ್ಕು ದಿನಗಳವರೆಗೆ ಬೀದರ್‌ ಜಿಲ್ಲೆಯಾದ್ಯಂತ ಶೀತಗಾಳಿ ಬೀಸಲಿದ್ದು, ಸಾಮಾನ್ಯ ತಾಪಮಾನಕ್ಕಿಂತ 5ರಿಂದ 6 ಡಿಗ್ರಿ ಸೆಲ್ಸಿಯಸ್‌ ಕಡಿಮೆ ಇರಲಿದೆ. ಸಾರ್ವಜನಿಕರು ಎಚ್ಚರಿಕೆಯಿಂದ ಇರಬೇಕೆಂದು ಜಿಲ್ಲಾಡಳಿತ ರೆಡ್‌ ಅಲರ್ಟ್‌ ಘೋಷಿಸಿದೆ. ‘ಸೂರ್ಯೋದಯಕ್ಕಿಂತ ಮುಂಚೆ, ಸೂರ್ಯಾಸ್ತದ ನಂತರ ವಾಕಿಂಗ್‌ ಮಾಡುವವರು ಎಚ್ಚರ ವಹಿಸಬೇಕು. ದ್ವಿಚಕ್ರ ವಾಹನಗಳಲ್ಲಿ ಹೊರಗೆ ಓಡಾಡಬಾರದು’ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಶಿವಕುಮಾರ ಶೀಲವಂತ ಮನವಿ ತಿಳಿಸಿದ್ದಾರೆ.

ಡಿಸೆಂಬರ್ 23 ರಿಂದ 24 ರವರೆಗೆ ದಕ್ಷಿಣ ಒಳನಾಡು ಅಂದರೆ ಚಿಕ್ಕಬಳ್ಳಾಪುರ, ಕೋಲಾರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ರಾಮನಗರ, ಚಾಮರಾಜನಗರ ಮತ್ತು ಮೈಸೂರು ಜಿಲ್ಲೆಗಳ ಪ್ರತ್ಯೇಕ ಸ್ಥಳಗಳಲ್ಲಿ ಲಘು ಮಳೆ ಬೀಳುವ ಸಾಧ್ಯತೆ ಇದೆ ಎಂದು ಐಎಂಡಿ ಮುನ್ಸೂಚನೆ ನೀಡಿದೆ.

ಈ ಅವಧಿಯಲ್ಲಿ, ಕರಾವಳಿ ಕರ್ನಾಟಕ, ಉತ್ತರ ಒಳನಾಡಿನ ಕರ್ನಾಟಕ ಮತ್ತು ದಕ್ಷಿಣ ಒಳನಾಡಿನ ಕರ್ನಾಟಕದ ಉಳಿದ ಜಿಲ್ಲೆಗಳಲ್ಲಿ ಒಣ ಹವಾಮಾನ ಮುಂದುವರಿಯುವ ನಿರೀಕ್ಷೆಯಿದೆ ಎಂದು ಹೇಳಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!