ಹೊಸದಿಗಂತ ವರದಿ, ಹಾಸನ :
ನಗರ ಸಾರಿಗೆ ಬಸ್ ನಿಲ್ದಾಣ ಸಮೀಪ ಶಾಸಕರ ಕ್ಷೇಮಾಭಿವೃದ್ಧಿ ನಿಧಿ ಬಳಸಿ ನಿರ್ಮಿಸಲಾಗುತ್ತಿರುವ ಟಾಂಗಾ ನಿಲ್ದಾಣ ಕಟ್ಟಡ ನಿರ್ಮಾಣದ ಬಗ್ಗೆ ಪರ-ವಿರೋಧ ಚರ್ಚೆ, ಹೋರಾಟ ನಡೆದ ಹಿನ್ನೆಲೆ ಕೂಡಲೇ ಕಾಮಗಾರಿಯನ್ನು ಸ್ಥಗಿತ ಮಾಡುವಂತೆ ಜಿಲ್ಲಾಧಿಕಾರಿ ಸಿ.ಸತ್ಯಭಾಮಾ ಮಂಗಳವಾರ ಆದೇಶ ಹೊರಡಿಸಿದ್ದಾರೆ.
ಸ್ಥಳೀಯ ಸಂಸ್ಥೆಗಳ ಅನುಮತಿ ಪಡೆಯದೇ ಕಾನೂನು ಬಾಹಿರವಾಗಿ ಟಾಂಗಾ ನಿಲ್ದಾಣ ಕಟ್ಟಡ ನಿರ್ಮಾಣ ಮಾಡಲಾಗುತ್ತಿದ್ದು ಸರ್ಕಾರಿ ಜಾಗವನ್ನು ಒತ್ತುವರಿ ಮಾಡಲಾಗಿದೆ, ಕೂಡಲೇ ಕಾಮಗಾರಿ ಸ್ಥಗಇತಗೊಳಿಸಿ ಆ ಭಾಗದಲ್ಲಿ ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಬಿಜೆಪಿ ಪ್ರಮುಖರು ಎರಡು ಬಾರಿ ಪ್ರತಿಭಟನೆ ನಡೆಸಿದ್ದರು.
ಇದಕ್ಕೆ ಪ್ರತಿಯಾಗಿ ಜೆಡಿಎಸ್ನ ಕೆಲವು ಕಾರ್ಯರ್ತರು ಹಾಗೂ ಜಟಕಾ ಗಾಡಿ ಮಾಲೀಕರ ಸಂಘದ ಪದಾಧಿಕಾರಿಗಳು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿ, ದಾಖಲೆಗಳನ್ನು ಪರಿಶಿಲಿಸಿ ಮುಂದಿನ ಕ್ರಮ ಕೈಗೊಳ್ಳಬೇಕು ಎಂದು ಕೇಳಿಕೊಂಡಿದ್ದರು. ಈ ಹಿನ್ನೆಲೆ ನಿರ್ಮಾಣ ಹಂತದಲ್ಲಿರುವ ಕಟ್ಟಡ ವಿವಾದಕ್ಕೆ ಎಡೆ ಮಾಡಿಕೊಟ್ಟಿರುವುದರಿಂದ ಅಹಿತಕರ ಘಟನೆಗಳು ನಡೆಯಬಹುದು ಎಂಬ ಕಾರಣಕ್ಕೆ ಮುನ್ನೆಚ್ಚರಿಕೆ ಕ್ರಮವಾಗಿ ಕಟ್ಟಡ ಕಾಮಗಾರಿಯ್ನು ಮುಂದಿನ ಆದೇಶದ ವರೆಗೂ ಸ್ಥಗಿತ ಮಾಡುವಂತೆ ಡಿಸಿ ಆದೇಶಿಸಿದ್ದಾರೆ.
ಪ್ರಕರಣ ಇತ್ಯರ್ಥ ಆಗುವ ವರೆಗೂ ಅದಕ್ಕೆ ಸಂಬಂಧಿಸಿ ಯಾರೂ ಸಹ ಪ್ರತಿಭಟನೆ, ಧರಣಿ, ಸಂಭ್ರಮಾಚರಣೆ ಮಾಡಬಾರದು. ನಿಷೇಧಿತ ಸ್ಥಳದಲ್ಲಿ ಯಾವುದೇ ಸಭೆ, ಗುಂಪು ಚರ್ಚೆ ನಡೆಸಬಾರದು. ಆದೇಶ ಮೀರಿ ನಡೆದುಕೊಂಡವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.