ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯ ವಿಧಾನಸಭೆ ಚುನಾವಣೆ ದಿನಾಂಕ ಘೋಷಣೆ ಆಗಿದ್ದು, ಇನ್ನೇನು ಕೆಲವೇ ದಿನಗಳಲ್ಲಿ ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡುತ್ತೇವೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದು, ಕಾಂಗ್ರೆಸ್ 60-70 ಸೀಟ್‌ಗಳನ್ನು ಮಾತ್ರ ಗೆಲ್ಲಲಿದೆ ಎಂದು ಬಿಎಸ್‌ವೈ ಹೇಳಿದ್ದಾರೆ.
ರಾಹುಲ್ ಗಾಂಧಿ ಪ್ರಧಾನಿ ಮೋದಿ ಅವರಿಗೆ ಸಮಾನ ಆಗೋಕೆ ಸಾಧ್ಯವೇ ಇಲ್ಲ, ಕಾಂಗ್ರೆಸ್ ಅಧಿಕಾರ ಹಿಡಿಯುವುದು ಅಸಾಧ್ಯ, ಅವರು ಬರೀ ಹಗಲುಗನಸು ಕಾಣುತ್ತಿದ್ದಾರೆ. ಅದು ತಿರುಕನ ಕನಸಷ್ಟೇ, 60-70 ಸೀಟಿಗಿಂತ ಹೆಚ್ಚು ಗೆಲ್ಲುವುದು ಅಸಾಧ್ಯ ಎಂದಿದ್ದಾರೆ.
ಲೋಕಸಭೆ ಜನಬೆಂಬಲ ಪುನರಾವರ್ತನೆಯ ವಿಶ್ವಾಸ:
ಲೋಕಸಭೆಯಲ್ಲಿ 25 ಸೀಟು ಗೆಲ್ಲುವುದಾಗಿ ಹೇಳಿದ್ದೆ ಅದು ಸತ್ಯವಾಗಿದೆ, ಹಾಗೆ ಕಾಂಗ್ರೆಸ್ 60-70 ಸೀಟ್ ಪಡೆಯುತ್ತದೆ ಎಂದು ಭವಿಷ್ಯ ಹೇಳಿದ್ದೇನೆ ಇದೂ ಸತ್ಯವಾಗುತ್ತದೆ ಎಂದು ಹೇಳಿದ್ದಾರೆ. ನಾಲ್ಕು ತಂಡಗಳ ವಿಜಯ ಸಂಕಲ್ಪ ಯಾತ್ರೆಯ ರೋಡ್ ಶೋ, ಸಾರ್ವಜನಿಕ ಸಭೆಗಳಲ್ಲಿ ಸೇರಿದ ಜನರ ಸಂಖ್ಯೆಯಿಂದ ಕಾಂಗ್ರೆಸ್ ಹೆದರಿಕೆ. ಬಿಜೆಪಿಗೆ ಜನಬೆಂಬಲವಿದೆ. ನರೇಂದ್ರ ಮೋದಿ, ಅಮಿತ್ ಶಾ ರಂಥ ನಾಯಕರು ಬಿಜೆಪಿಯಲ್ಲಿದ್ದಾರೆ ಇದು ನಮ್ಮ ಗೆಲುವಿಗೆ ಪ್ರಮುಖ ಕಾರಣ ಎಂದಿದ್ದಾರೆ.
ಸಂಸದರೆಲ್ಲರೂ ಕ್ಷೇತ್ರದಲ್ಲೇ ಇದ್ದು ಕೆಲಸ ಮಾಡ್ತಾರೆ:
ಸಂಸದರು, ರಾಜ್ಯಸಭಾ ಸದಸ್ಯರು ಚುನಾವಣೆ ಮುಗಿಯುವವರೆಗೂ ಸ್ವಕ್ಷೇತ್ರದಲ್ಲಿದ್ದು, ಹೆಚ್ಚು ಸಂಖ್ಯೆಯಲ್ಲಿ ಬಿಜೆಪಿ ಗೆಲುವಿಗೆ ಕೆಲಸ ಮಾಡಲಿದ್ದಾರೆ. ಅದರಂತೆ ಕೆಲಸ ಪ್ರಾರಂಭ ಮಾಡಿದ್ದಾರೆ. ಮೊನ್ನೆ ಸಂಸದರ ಸಭೆಯನ್ನು ಬೆಂಗಳೂರಿನಲ್ಲಿ ನಡೆಸಲಾಗಿದೆ ಎಂದರು.
ಐತಿಹಾಸಿಕ ಮೀಸಲು ನಿರ್ಣಯ:
ರಾಜ್ಯ, ದೇಶದ ಇತಿಹಾಸದಲ್ಲಿ ಮೊದಲ ಬಾರಿಗೆ ಮುಖ್ಯಮಂತ್ರಿಗಳು ಮೀಸಲಾತಿ ಮೂಲಕ ಸಾಮಾಜಿಕ ನ್ಯಾಯ ಒದಗಿಸಿದ್ದಾರೆ. ಲಿಂಗಾಯತ- ಶೇ 7, ಒಕ್ಕಲಿಗರು-ಶೇ 6, ಎಸ್‍ಸಿ ಎಡ ಶೇ 6, ಎಸ್‍ಸಿ ರೈಟ್ 5.5, ಬೋವಿ ಬಂಜಾರ ಸಮಾಜದವರಿಗೆ ಶೇ 4.5, ಇತರರು ಶೇ 1- ಹೀಗೆ ಎಲ್ಲ ವರ್ಗದ ಜನರಿಗೆ ನ್ಯಾಯ ಒದಗಿಸುವ ಕೆಲಸ ಮಾಡಿದ್ದಾರೆ.
ತಾಂಡಾ ಅಭಿವೃದ್ಧಿ ನೆನಪಿಸಿದ ಬಿ ಎಸ್ ವೈ:
ನಾನು ಸಿಎಂ ಆಗಿದ್ದಾಗ ಲಂಬಾಣಿ ಅಭಿವೃದ್ಧಿ ನಿಮಗ, ತಾಂಡಾ ಅಭಿವೃದ್ಧಿ ನಿಗಮ, ತಾಂಡಾಗಳನ್ನು ಕಂದಾಯ ಗ್ರಾಮವಾಗಿ ಪರಿವರ್ತನೆ ಮಾಡಿದ್ದನ್ನು ಜನ ನೆನಪಿನಲ್ಲಿ ಇಟ್ಟುಕೊಂಡಿದ್ದಾರೆ. ಭೂರಹಿತ ದಲಿತ ಸಮುದಾಯಕ್ಕೆ ಭೂಮಿ ವಿತರಣೆ ಮಾಡಿದ್ದು, ಭಾಗ್ಯಲಕ್ಷ್ಮೀ ಯೋಜನೆ, ಬೈಸಿಕಲ್ ನೀಡುವುದು, ಹಾಲು ಉತ್ಪಾದಕರಿಗೆ ಪ್ರೋತ್ಸಾಹಧನ ನೀಡಿದ್ದು ಖುಷಿಕೊಟ್ಟಿದೆ ಎಂದಿದ್ದಾರೆ.
ವಿಜಯ ಯಾತ್ರೆ ಮೂಲಕ ರಾಜ್ಯದಲ್ಲಿ ಬಿಜೆಪಿ ಗಾಳಿ ಬೀಸಿದೆ, ಪ್ರತಿ ಸಭೆಯಲ್ಲೂ 15-20 ಸಾವಿರ ಮಂದಿ ಭಾಗಿಯಾಗಿದ್ದಾರೆ. ಇದು ಬಿಜೆಪಿ ಜನಬೆಂಬಲ ಎಂದಿದ್ದಾರೆ. ಆಯುಷ್ಮಾನ್, ಉಜ್ವಲ, ಶೌಚಾಲಯ, ಜಲಜೀವನ್ ಯೋಜನೆ, ಬೊಮ್ಮಾಯಿ ಸರ್ಕಾರದ ವಿವಿಧ ಯೋಜನೆಗಳು ನಮ್ಮ ಗೆಲುವಿಗೆ ಕಾರಣವಾಗುತ್ತದೆ ಎಂದಿದ್ದಾರೆ.
ಈ ಬಾರಿ ಕೇಂದ್ರ ಸಚಿವರು, ಸಂಸದರ ಬೆಂಬಲ- ಸಹಕಾರ ಮತ್ತು ಪ್ರಚಾರದಿಂದ ನಾವು ಮತ್ತೆ ಅಧಿಕಾರ ಪಡೆಯಲಿದ್ದೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಮೀಸಲಾತಿ ವಿಚಾರದಲ್ಲಿ ಮುಸ್ಲಿಂ ಬಾಂಧವರಿಗೆ ಅನ್ಯಾಯ ಮಾಡಿಲ್ಲ. ಸಂವಿಧಾನಬಾಹಿರವಾಗಿ ಸೇರಿಸಿದ್ದ ಕಾರಣ ಇಲ್ಲಿ ರದ್ದು ಮಾಡಿ, ಅವರನ್ನು ಇಡಬ್ಲ್ಯುಎಸ್ ಅಡಿ ಸೇರಿಸಿದ್ದೇವೆ. ತಪ್ಪು ಗ್ರಹಿಕೆ ಬೇಡ ಎಂದು ಸ್ಪಷ್ಟಪಡಿಸಿದರು.
ರಾಜ್ಯ ಚುನಾವಣಾ ನಿರ್ವಹಣಾ ಸಮಿತಿ ಸಂಚಾಲಕಿ ಹಾಗೂ ಕೇಂದ್ರ ಸಚಿವೆ ಕು. ಶೋಭಾ ಕರಂದ್ಲಾಜೆ, ಕೇಂದ್ರ ಸಚಿವ ಭಗವಂತ ಖೂಬಾ, ರಾಷ್ಟ್ರೀಯ ವಕ್ತಾರ ಸೈಯದ್ ಜಾಫರ್ ಇಸ್ಲಾಂ, ರಾಜ್ಯ ಪ್ರಧಾನ ಕಾರ್ಯದರ್ಶಿ ಸಿದ್ದರಾಜು, ರಾಜ್ಯ ಮುಖ್ಯ ವಕ್ತಾರ ಎಂ.ಜಿ. ಮಹೇಶ್, ಎಸ್‍ಸಿ ಮೋರ್ಚಾ ರಾಜ್ಯ ಅಧ್ಯಕ್ಷ ಮತ್ತು ವಿಧಾನಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ ಅವರು ಉಪಸ್ಥಿತರಿದ್ದರು.