ಮಹದಾಯಿ-ಕಳಸಾ ಬಂಡೂರಿ ಯೋಜನೆ ಶೀಘ್ರ ಜಾರಿಗೆ ಬದ್ಧತೆ: ಡಿ ಕೆ ಶಿವಕುಮಾರ್

ಹೊಸದಿಗಂತ ಡಿಜಿಟಲ್ ಡೆಸ್ಕ್ :

ಮಹದಾಯಿ, ಕಳಸಾ-ಬಂಡೂರಿ ಯೋಜನೆಗಳ ಅನುಷ್ಠಾನ ಸಂಬಂಧ ಕಾನೂನಾತ್ಮಕ ತೊಡಕುಗಳನ್ನು ಶೀಘ್ರ ಪರಿಹರಿಸಿಕೊಂಡು ಕಾಮಗಾರಿಗೆ ಚಾಲನೆ ನೀಡಲು ರಾಜ್ಯ ಸರ್ಕಾರ ಬದ್ಧವಾಗಿದೆ ಎಂದು ಜಲಸಂಪನ್ಮೂಲ ಸಚಿವ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ.

ಈ ವಿಚಾರವಾಗಿ ಇಡೀ ರಾಜ್ಯದ ಜನ ಪಕ್ಷ ಭೇದ ಮರೆತು ಹೋರಾಟ ಮಾಡಿದ್ದಾರೆ. ನ್ಯಾಯಾಲಯದ ತೀರ್ಪು ಬಂದಿದ್ದು, ನಮ್ಮ ರಾಜ್ಯದ ಪಾಲಿನ ನೀರು ಹಂಚಿಕೆ ಮಾಡಲಾಗಿದೆ.

ಕೇಂದ್ರ ಜಲ ಆಯೋಗ ಸಹ ನಮ್ಮ ಪಾಲಿನ ನೀರು ಬಳಸಲು ಅನುಮತಿ ನೀಡಿತ್ತು. ಈ ಹಿನ್ನೆಲೆಯಲ್ಲಿ ವಿಜಯೋತ್ಸವ ಸಹ ಆಚರಿಸಲಾಗಿತ್ತು ಎಂದರು. ಈ ನಡುವೆ 2023ರಲ್ಲಿ ಗೋವಾದ ಅಧಿಕಾರಿ ಈ ಯೋಜನೆ ಪ್ರಶ್ನಿಸಿ ನಮ್ಮ ಸರ್ಕಾರಕ್ಕೆ ಶೋಕಾಸ್‌ ನೋಟಿಸ್‌ ನೀಡಿದ್ದಾನೆ. ನೋಟಿಸ್‌ ಕೊಡಲು ಆತ ಯಾರು?

ಕೇಂದ್ರ ಸರ್ಕಾರ ಅಥವಾ ನ್ಯಾಯಾಲಯ ನೋಟಿಸ್‌ ನೀಡಬಹುದು. ಆದರೆ, ಆ ಅಧಿಕಾರಿ ನೋಟಿಸ್‌ ನೀಡಿದ್ದಾನೆ. ಸರ್ಕಾರಕ್ಕೆ ಯಾವುದೇ ವ್ಯಕ್ತಿ ನೋಟಿಸ್‌ ನೀಡಲು ಸಾಧ್ಯವೇ? ಈ ನೋಟಿಸ್‌ಗೆ ಮಾನ್ಯತೆ ನೀಡದೆ ಯೋಜನೆ ಮುಂದುವರೆಸಬೇಕಿತ್ತು.

ಅಂದು ನಾನು ಅಧಿಕಾರದಲ್ಲಿ ಇದ್ದಿದ್ದರೆ ಆ ನೋಟಿಸ್‌ಗೆ ಕ್ಯಾರೇ ಎನ್ನುತ್ತಿರಲಿಲ್ಲ. ಇದಾದ ಬಳಿಕ ನಮ್ಮ ರಾಜ್ಯದವರು ನ್ಯಾಯಾಲಯ ಮೆಟ್ಟಿಲೇರಿದ್ದಾರೆ ಎಂದು ಹೇಳಿದರು. ಈ ವಿಚಾರವಾಗಿ ನಾನು ನಾಲ್ಕು ಬಾರಿ ಕೇಂದ್ರ ಜಲಸಂಪನ್ಮೂಲ ಸಚಿವರನ್ನು ಭೇಟಿಯಾಗಿ ಚರ್ಚಿಸಿದ್ದೇನೆ. ಅವರಿಗೆ ಯಾವ ರಾಜಕೀಯ ಒತ್ತಡ ಇದೆಯೋ ಗೊತ್ತಿಲ್ಲ. ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಅವರನ್ನೂ ಮೂರು ಬಾರಿ ಭೇಟಿಯಾಗಿದ್ದೇನೆ. ಈ ತಿಂಗಳು ಬಂದು ಭೇಟಿಯಾಗುವಂತೆ ಸಮಯ ನೀಡಿದ್ದಾರೆ. ಕಳಸಾ-ಬಂಡೂರಿ ವಿಚಾರದಲ್ಲಿ ಕರ್ನಾಟಕ ರಾಜ್ಯಕ್ಕೆ ಮೀಸಲಾದ ಪ್ರತಿ ಹನಿ ನೀರನ್ನೂ ಬಳಸುವ ಹಕ್ಕಿದೆ. ನಾನು ಇಲಾಖೆ ಸಚಿವನಾದ ಬಳಿಕ ಟೆಂಡರ್‌ ಕರೆದು ಗುತ್ತಿಗೆ ಅಂತಿಮಗೊಳಿಸಿದ್ದೇನೆ. ಕಾನೂನು ವಿಚಾರಗಳನ್ನು ಅಧ್ಯಯನ ಮಾಡುತ್ತಿದ್ದೇನೆ ಎಂದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!