ಹೊಸ ದಿಗಂತ ವರದಿ,ಚಿತ್ರದುರ್ಗ
ಕಾನೂನು ವ್ಯಾಪ್ತಿಯಲ್ಲಿ ಮಾಡಲು ಸಾಧ್ಯವಿರುವ ಎಲ್ಲ ರೀತಿಯ ಸೌಲಭ್ಯಗಳನ್ನು ಬೋವಿ ಸಮುದಾಯಕ್ಕೆ ನೀಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದರು.
ನಗರದ ಹೊರ ವಲಯದಲ್ಲಿರುವ ಬೋವಿ ಗುರುಪೀಠದಲ್ಲಿ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ೨೫ನೇ ವರ್ಷದ ದೀಕ್ಷಾ ರಜತ ಮಹೋತ್ಸವ ಉದ್ಘಾಟಿಸಿ ಮಾತನಾಡಿದ ಅವರು, ಬೋವಿ ಸಮುದಾಯದ ಅಭಿವೃದ್ಧಿ ನಿಗಮಕ್ಕೆ ಬೋವಿ ವಡ್ಡರ ಅಭಿವೃದ್ಧಿ ನಿಗಮ ಎಂದು ಮರುನಾಮಕರಣ ಮಾಡಲಾಗುವುದು. ಬೋವಿ ಸಮುದಾಯಕ್ಕೆ ಒಂದು ವಿಧಾನ ಪರಿಷತ್ ಸ್ಥಾನ ನೀಡಲಾಗುವುದು. ಬೋವಿ ಅಭಿವೃದ್ಧಿ ನಿಗಮಕ್ಕೆ ಅಗತ್ಯ ಅನುದಾನ ನೀಡಲಾಗುವುದು ಎಂದರು.
ಶೋಷಿತ ಸಮುದಾಯಗಳಿಗೆ ಒಂದು ಗುರಿ ಇರಬೇಕು. ಆ ಗುರಿಯನ್ನು ತಲುಪಲು ಅಗತ್ಯ ಮಾರ್ಗದರ್ಶನ ನೀಡುವವರು ಬೇಕು. ಅಂದಾಗ ಶೋಷಿತ ಸಮುದಾಯಗಳು ಸಮಾಜದ ಮುಖ್ಯವಾಹಿನಿಗೆ ಬರಲು ಸಾಧ್ಯನೀ ನಿಟ್ಟಿನಲ್ಲಿ ಬೋವಿ ಸಮುದಾಯಕ್ಕೆ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಸೂಕ್ತ ಮಾರ್ಗದರ್ಶನ ನೀಡುತ್ತಿದ್ದಾರೆ. ಅವರ ಮಾರ್ಗದಲ್ಲಿ ನಡೆದು ಅಭಿವೃದ್ಧಿ ಸಾಧಿಸಬೇಕು. ಸಮಾಜ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವ ಮೂಲಕ ಅವರನ್ನು ಸುಶಿಕ್ಷಿತರನ್ನಾಗಿ ಮಾಡಬೇಕು ಎಂದು ಹೇಳಿದರು.
ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಜಾತಿ ವ್ಯವಸ್ಥೆಯನ್ನು ಜಾರಿಗೆ ತಂದಿವೆ. ಇದರಿಂದಾಗಿ ವೃತ್ತಿಯ ಆಧಾರದ ಮೇಲೆ ಜನಸಮುದಾಯವನ್ನು ಗುರುತಿಸುವಂತಾಗಿದೆ. ಕುಲಕಸುಬನ್ನೇ ನೆಚ್ಚಿಕೊಂಡು ಬದುಕುತ್ತಿರುವ ಶೋಷಿತ ಸಮುದಾಯಗಳು ಆರ್ಥಿಕವಾಗಿ ಅಭಿವೃದ್ಧಿ ಸಾಧಿಸಲು ಸಾಧ್ಯವಾಗಿಲ್ಲ. ಹಾಗಾಗಿ ಶೋಷಿತ ವರ್ಗದವರು ಅಕ್ಷರ ಕಲಿಕೆಗೆ ಹೆಚ್ಚಿನ ಆದ್ಯತೆ ನೀಡಬೇಕು. ವಿದ್ಯಾವಂತರಾದಾಗ ನೀವು ಯಾವುದೇ ಕೆಲಸ ಮಾಡಬಹುದು. ಇದರಿಂದ ನಿಮ್ಮ ಸ್ಥಾನಮಾನ ಹೆಚ್ಚುತ್ತದೆ. ಆರ್ಥಿಕ ಅಭಿವೃದ್ಧಿಯೂ ಆಗುತ್ತದೆ ಎಂದು ಕಿವಿಮಾತು ಹೇಳಿದರು.
ಮೇಲ್ವರ್ಗದ ಬಡವನನ್ನು ಬಹುವಚನದಲ್ಲಿ ಮಾತನಾಡಿಸುತ್ತಾರೆ. ಶೋಷಿತ ವರ್ಗದ ಶ್ರೀಮಂತನನ್ನೂ ಏಕವಚನದಲ್ಲಿ ಮಾತನಾಡಿಸಲಾಗುತ್ತದೆ. ಇದರಿಂದ ಸಮಾಜದಲ್ಲಿ ಅಸಮಾನತೆ ಉಂಟಾಗಿದೆ. ಇದರ ನಿವಾರಣೆಗೆ ಶಿಕ್ಷಣ ಪಡೆಯುವುದೊಂದೇ ಮಾರ್ಗ. ಶಿಕ್ಷಣ ಮೂಲಭೂತ ಹಕ್ಕು. ಸಂವಿಧಾನದಲ್ಲಿ ಕಡ್ಡಾಯ ಹಾಗೂ ಉಚಿತ ಶಿಕ್ಷಣಕ್ಕೆ ಅವಕಾಶ ಮಾಡಿಕೊಡಲಾಗಿದೆ. ಹಾಗಾಗಿ ಎಲ್ಲರೂ ತಪ್ಪದೇ ಶಿಕ್ಷಣ ಪಡೆಯಬೇಕು. ಶೋಷಿತ ಸಮುದಾಯಗಳಲ್ಲಿ ಶೇಕಡಾ ೭೫ ರಷ್ಟು ಜನರು ಇನ್ನೂ ಅನಕ್ಷರಸ್ಥರಿದ್ದಾರೆ. ಇವರೆಲ್ಲರೂ ಅಕ್ಷರ ಜ್ಞಾನ ಪಡೆಯುವ ಮೂಲಕ ಅಭಿವೃದ್ಧಿ ಸಾಧೀಸಬೇಕು ಎಂದರು.
ಮಂತ್ರಾಲಯದ ಸುಬುದೇಂದ್ರ ಸ್ವಾಮೀಜಿ ಸಾನಿಧ್ಯ ವಹಿಸಿದರು. ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಆಶೀರ್ವಚನ ನೀಡಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ , ಮಾಜಿ ಸಚಿವ ಅರವಿಂದ ಲಿಂಬಾವಳಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ, ಶಾಸಕ ವೆಂಕಟೇಶ್ ಮಾತನಾಡಿದರು. ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್, ಸಂಸದ ಮಲ್ಲೇಶ್‌ಬಾಬು, ಶಾಸಕರಾದ ಎಂ.ಚಂದ್ರಪ್ಪ, ಟಿ.ರಘುಮೂರ್ತಿ, ಕೆ.ಸಿ.ವೀರೇಂದ್ರ ಪಪ್ಪಿ ಸೇರಿದಂತೆ ಬೋವಿ ಸಮಾಜದ ಹಲವು ಮುಖಂಡರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.