ರಾಜಸ್ಥಾನದಲ್ಲಿ ಹಿಂದು ನವ ವರ್ಷ ಮೆರವಣಿಗೆ ಮೇಲೆ ದುಷ್ಕರ್ಮಿಗಳಿಂದ ಕಲ್ಲು ತೂರಾಟ

ಹೊಸದಿಗಂತ ಡಿಜಿಟಲ್ ಡೆಸ್ಕ್
ಜೈಪುರ: ಹಿಂದುಗಳ ನವ ಸಂವತ್ಸರ ಆಚರಣೆ ಸಂದರ್ಭದಲ್ಲಿ ಆಯೋಜಿಸಿದ ಬೈಕ್ ರ್ಯಾಲಿಯ ಮೇಲೆ ಮುಸ್ಲಿಂ ಗುಂಪು ದಾಳಿ ಮಾಡಿದ ಘಟನೆ ರಾಜಸ್ಥಾನದ ಕರೌಲಿಯಲ್ಲಿ ನಡೆದಿದೆ. ಸ್ಥಳದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದ್ದು, ಸ್ಥಳೀಯ ಆಡಳಿತವು ಸಿಆರ್‌ಪಿಸಿಯ ಸೆಕ್ಷನ್ 144 ವಿಧಿಸಿದೆ.

ಮುಸ್ಲಿಂ ಗುಂಪು ರ್ಯಾಲಿಯ ಮೇಲೆ ಕಲ್ಲು ತೂರಾಟ ನಡೆಸಿದ್ದು ಮಾತ್ರವಲ್ಲದೆ, ಹಲವು ಬೈಕ್‌ಗಳು ಮತ್ತು ಅಂಗಡಿಗಳಿಗೆ ಬೆಂಕಿ ಹಚ್ಚಿದೆ. ನಾಲ್ವರು ಪೊಲೀಸರು ಸೇರಿದಂತೆ ಸುಮಾರು 50 ಮಂದಿ ಗಾಯಗೊಂಡಿದ್ದು, ಅವರನ್ನು ನಗರದ ವಿವಿಧ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಗಾಯಾಳುಗಳ ಪೈಕಿ ಪುಷ್ಪೇಂದ್ರ ಎಂಬವರ ಸ್ಥಿತಿ ತೀರಾ ಗಂಭೀರವಾಗಿದ್ದು, ಅವರನ್ನು ಜೈಪುರಕ್ಕೆ ಸ್ಥಳಾಂತರಿಸಲಾಗಿದೆ. ಗಾಯಗೊಂಡವರ ದೇಹದ ಮೇಲೆ ಚಾಕುವಿನ ಗುರುತುಗಳಿರುವುದರಿಂದ ದಾಳಿಯಲ್ಲಿ ಮುಸ್ಲಿಂ ಗುಂಪು ಚಾಕುಗಳನ್ನು ಬಳಸಿದೆ ಎಂದು ವರದಿಗಳು ಸೂಚಿಸಿವೆ.
ಬೈಕ್ ರ್ಯಾಲಿಗೆ ಆಡಳಿತ ಮತ್ತು ಪೊಲೀಸ್ ಇಲಾಖೆಯಿಂದ ಸೂಕ್ತ ಅನುಮತಿ ಪಡೆಯಲಾಗಿತ್ತು. ಎಲ್ಲ ಅಗತ್ಯ ಅನುಮತಿ ಸಿಕ್ಕಿದ ನಂತರವೇ ಮೆರವಣಿಗೆ ಪ್ರಾರಂಭವಾಯಿತು. ಈ ಮೆರವಣಿಗೆಯು ಮುಸ್ಲಿಂ ಪ್ರಾಬಲ್ಯದ ಹತ್ವಾರಾ ಬಜಾರ್ ತಲುಪಿದಾಗ, ಮೆರವಣಿಗೆಯ ಮೇಲೆ ಭಾರೀ ಕಲ್ಲು ತೂರಾಟ ನಡೆಸಲಾಯಿತು. ಮುಸ್ಲಿಂ ಗುಂಪು ಹಿಂದುಗಳ ಅಂಗಡಿಗಳಿಗೆ ಮತ್ತು ಅವರ ವಾಹನಗಳಿಗೆ ಬೆಂಕಿ ಹಚ್ಚಿತು.
ಘಟನೆಯ ಕುರಿತು ಪ್ರತಿಕ್ರಿಯಿಸಿದ ಆಡಳಿತ ಮತ್ತು ಕಾನೂನು ಮತ್ತು ಸುವ್ಯವಸ್ಥೆ ಎಡಿಜಿ ಹವಾ ಸಿಂಗ್ ಘುಮಾರಿಯಾ, ಹಿಂದು ಸಂಘಟನೆಗಳು ಹಿಂದು ಹೊಸ ವರ್ಷದ ಸಂದರ್ಭದಲ್ಲಿ ಧಾರ್ಮಿಕ ಬೈಕ್ ರ್ಯಾಲಿಯನ್ನು ನಡೆಸುತ್ತಿದ್ದವು. ಮೆರವಣಿಗೆಯು ಮಸೀದಿಯೊಂದರ ಬಳಿ ತಲುಪಿದಾಗ, ಕೆಲವು ದುಷ್ಕರ್ಮಿಗಳು ಅವರ ಮೇಲೆ ಕಲ್ಲು ತೂರಾಟ ನಡೆಸಿದರು ಎಂದು ಹೇಳಿದ್ದಾರೆ.
ಘಟನೆಯಲ್ಲಿ 20ಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿವೆ. ಒಬ್ಬ ವ್ಯಕ್ತಿಯ ತಲೆಗೆ ಗಾಯಗಳಾಗಿದ್ದು, ಚಿಂತಾಜನಕ ಸ್ಥಿತಿಯಲ್ಲಿ ಜೈಪುರಕ್ಕೆ ಕಳುಹಿಸಲಾಗಿದೆ. ಘಟನೆ ಸಂಬಂಧ ನಾವು 24 ಜನರನ್ನು ವಶಕ್ಕೆ ಪಡೆದಿದ್ದೇವೆ, ಪ್ರದೇಶದಲ್ಲಿ ಕರ್ಫ್ಯೂ ವಿಧಿಸಲಾಗಿದೆ ಎಂದು ತಿಳಿಸಿದ್ದಾರೆ.
ರಾಜಸ್ಥಾನದ ಮಾಜಿ ಮುಖ್ಯಮಂತ್ರಿ ಮತ್ತು ಬಿಜೆಪಿ ನಾಯಕಿ ವಸುಂಧರಾ ರಾಜೆ ಅವರು ಮೆರವಣಿಗೆಯ ಮೇಲಿನ ದಾಳಿಗೆ ‘ವಿರೋಧಿ ಮನಸ್ಥಿತಿಯ ಜನರನ್ನು ದೂಷಿಸಿದ್ದಾರೆ. ‘ನವ ಸಂವತ್ಸರದ ಸಂದರ್ಭದಲ್ಲಿ ಕರೌಲಿಯಲ್ಲಿ ನಡೆದ ರ್ಯಾಲಿಯ ಮೇಲೆ ವಿರೋಧಿ ಮನಸ್ಥಿತಿಯ ಜನರು ನಡೆಸಿದ ದಾಳಿಯನ್ನು ನಾನು ಬಲವಾಗಿ ಖಂಡಿಸುತ್ತೇನೆ. ರಾಜಸ್ಥಾನದಲ್ಲಿ ದ್ವೇಷದ ಮನಸ್ಥಿತಿ ಬೆಳೆಯಲು ಬಿಡುವುದಿಲ್ಲ. ತಪ್ಪಿತಸ್ಥರ ವಿರುದ್ಧ ಆಡಳಿತ ಕಠಿಣ ಕ್ರಮ ಕೈಗೊಳ್ಳಬೇಕು’ ಎಂದು ರಾಜೇ ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

ಮೆರವಣಿಗೆ ಮೇಲಿನ ದಾಳಿಗೆ ರಾಜಸ್ಥಾನದ ಕಾಂಗ್ರೆಸ್ ಸರಕಾರದ ತುಷ್ಟೀಕರಣ ನೀತಿಯೇ ಕಾರಣ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಸತೀಶ್ ಪೂನಿಯಾ ಆರೋಪಿಸಿದ್ದಾರೆ. ಇದಕ್ಕೆ ಕಾಂಗ್ರೆಸ್ ಸರಕಾರದ ಓಲೈಕೆ ನೀತಿಯೇ ಕಾರಣ. ಇದುವರೆಗೆ ಯಾವುದೇ ಬಂಧನವಾಗಿಲ್ಲ. ಹಿಂದು ಹೊಸ ವರ್ಷದಂದು ಆಯೋಜಿಸಲಾಗಿದ್ದ ಬೈಕ್ ರ್ಯಾಲಿಯಲ್ಲಿ ಇದು ಯೋಜಿತ ದಾಳಿಯಾಗಿದೆ ಎಂದು ಪೂನಿಯಾ ಹೇಳಿದ್ದಾರೆ.

ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಸೂಚನೆ ನೀಡಿರುವುದಾಗಿ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ತಿಳಿಸಿದ್ದು, ಶಾಂತಿ ಕಾಪಾಡುವಂತೆ ಜನತೆಗೆ ಮನವಿ ಮಾಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!