ಸಿಎಂ ಗದ್ದುಗೆಗೆ ಪೈಪೋಟಿ: ನಾಲ್ಕು ದಿನ ಕಳೆದರೂ ಬಾರದ ಒಮ್ಮತದ ನಿರ್ಧಾರ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ರಾಜ್ಯದಲ್ಲಿ ಕಾಂಗ್ರೆಸ್ ಬಹುಮತ ಪಡೆದರೂ ಈವರೆಗೂ ನೂತನ ಸರ್ಕಾರ ಅಸ್ತಿತ್ವಕ್ಕೆ ಬಂದಿಲ್ಲ. ಇದಕ್ಕೆ ಕಾರಣ ಸಿಎಂ ಗಾದಿಗಾಗಿ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ನಡುವೆ ಕಿತ್ತಾಟ.

ದೆಹಲಿಯಲ್ಲಿ ಬೀಡುಬಿಟ್ಟಿರುವ ಇಬ್ಬರುಸಿಎಂ ಆಯ್ಕೆಗೆ ಕಸರತ್ತು ನಡೆಸುತ್ತಲೇ ಇದ್ದಾರೆ. ಇವರ ನಡುವೆ ಒಮ್ಮತ ಮೂಡಿಸುವಲ್ಲಿ ಹೈಕಮಾಂಡ್ ನಾಯಕರು ಸಫಲರಾಗಿಲ್ಲ. ಒಂದು ಹಂತದಲ್ಲಿ ಸಿದ್ದರಾಮಯ್ಯ ಸಿಎಂ, ಡಿಕೆ ಶಿವಕುಮಾರ್ ಡಿಸಿಎಂ ಆಗ್ತಾರೆ ಅನ್ನೋ ಸುದ್ದಿ ಹರಿದಾಡಿತ್ತು.

ರಾಜ್ಯದಲ್ಲಿ ಸಿದ್ದರಾಮಯ್ಯ ಅಭಿಮಾನಿಗಳು, ಬೆಂಬಲಿಗರು ವಿಜಯೋತ್ಸವ ಆಚರಿಸಿದ್ದರು. ಆದರೆ ಹೈಕಮಾಂಡ್‌ನ ಈ ಸೂತ್ರಕ್ಕೆ ಡಿಕೆ ಶಿವಕುಮಾರ್ ಸುತಾರಾಂ ಒಪ್ಪದ ಕಾರಣ ಈ ಫಾರ್ಮುಲ ಫೇಲ್ ಆಯ್ತು.

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬಳಿಕ ರಾಹುಲ್ ಗಾಂಧಿ ಕೂಡ, ಡಿಕೆ ಶಿವಕುಮಾರ್ ಮನವೊಲಿಸುವಲ್ಲಿ ವಿಫಲರಾದರು. ಮಲ್ಲಿಕಾರ್ಜುನ ಖರ್ಗೆ ಮತ್ತು ರಾಹುಲ್ ಗಾಂಧಿ ಮೇಲಿಂದ ಮೇಲೆ ಸಭೆಗಳನ್ನು ನಡೆಸಿದರೂ ಪ್ರಯೋಜನವಾಗಲಿಲ್ಲ. ಶಿಮ್ಲಾದಿಂದ ಪ್ರಿಯಾಂಕಾ ಗಾಂಧಿ ಕರೆ ಮಾಡಿದ್ರೂ ಡಿಕೆ ಶಿವಕುಮಾರ್ ಮಾತ್ರ ಸಿಎಂ ವಿಚಾರದಲ್ಲಿ ತಮ್ಮ ನಿಲುವು ಬದಲಿಸಲಿಲ್ಲ. ಇಬ್ಬರು ನಾಯಕರು ಒಂದು ಕಡೆ ಸಭೆಯಲ್ಲಿ ಪಾಲ್ಗೊಳ್ಳಲು ಒಪ್ಪಿಗೆ ಕೂಡ ಸೂಚಿಸಲಿಲ್ಲ.

ಕೊನೆಗೆ ಮಾಧ್ಯಮಗಳ ಮುಂದೆ ಕಾಣಿಸಿಕೊಂಡ ರಣದೀಪ್ ಸುರ್ಜೆವಾಲಾ, ಸಿಎಂ ಆಯ್ಕೆ ಇನ್ನೂ ಫೈನಲ್ ಆಗಿಲ್ಲ. ಚರ್ಚೆಗಳು ಮುಂದುವರಿದಿವೆ. ವದಂತಿಗಳಿಗೆ, ಸುಳ್ಳು ಸುದ್ದಿಗಳಿಗೆ ಯಾರೂ ಕಿವಿಗೊಡಬಾರದು. ಒಮ್ಮತದಿಂದ ಸಿಎಂ ಅಭ್ಯರ್ಥಿಯನ್ನು ಆಯ್ಕೆ ಮಾಡ್ತೇವೆ. ಹೈಕಮಾಂಡ್ ನಿರ್ಧಾರ ಮಾಡಿದ ಕೂಡಲೇ ನಿಮಗೇ ಮೊದಲು ತಿಳಿಸ್ತೇವೆ ಎಂದರು.

ಹೀಗಾಗಿ ಸಿಎಂ ಆಯ್ಕೆಯ ಘೋಷಣೆ ಇವತ್ತಿನ ಮಟ್ಟಿಗೆ ನೆನೆಗುದಿಗೆ ಬಿದ್ದಿದೆ. ನಾಳೆ ಏನಾಗಲಿದೆ ಕಾದುನೋಡಬೇಕಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here