ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರು: ರಾಜ್ಯದಲ್ಲಿ ಸಿಎಂ, ಡಿಸಿಎಂ ಗುಂಪುಗಳಿಂದ ಸುಲಿಗೆ ಮಾಡಲು ಪೈಪೋಟಿ ನಡೆದಿದೆ ಎಂದು ಬಿಜೆಪಿ ರಾಜ್ಯ ಎಸ್‍ಸಿ ಮೋರ್ಚಾ ಅಧ್ಯಕ್ಷ ಹಾಗೂ ವಿಧಾನಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ ಅವರು ಆರೋಪಿಸಿದರು.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದ ಒಳಗಡೆ ದೊಡ್ಡ ಎರಡು ಗುಂಪುಗಳಿವೆ. ಸರಕಾರದಲ್ಲೂ ಎರಡು ಗುಂಪುಗಳಾಗಿದೆ. 1969ರಲ್ಲಿ ಕಾಂಗ್ರೆಸ್ ಎರಡು ಭಾಗವಾಗಿ ಒಡೆದಿದ್ದು, ಒಂದು ಭಾಗಕ್ಕೆ ಒ ಕಾಂಗ್ರೆಸ್ ಮತ್ತು ಇನ್ನೊಂದು ಗುಂಪಿಗೆ ಆರ್ ಕಾಂಗ್ರೆಸ್ ಎಂದು ಹೆಸರಿಟ್ಟಿದ್ದರು. ಬಳಿಕ ಅದನ್ನು ಇಂಡಿಕೇಟ್ ಮತ್ತು ಸಿಂಡಿಕೇಟ್ ಎನ್ನುತ್ತಿದ್ದರು. ಅದೇರೀತಿ, ಈ ಸರಕಾರದಲ್ಲಿ ಇಂಡಿಕೇಟ್ ಸರಕಾರ ಡಿಸಿಎಂ ಅವರದು; ಸಿಂಡಿಕೇಟ್ ಸರಕಾರ ಸಿದ್ದರಾಮಯ್ಯರದು ಎಂದು ವಿಶ್ಲೇಷಿಸಿದರು.
ಎರಡೂ ಗುಂಪುಗಳ ಮಧ್ಯದಲ್ಲಿ ಸುಲಿಗೆಯ ಪೈಪೋಟಿ ನಡೆದಿದೆ. ಈ ಸುಲಿಗೆಯ ಪೈಪೋಟಿಯಲ್ಲಿ ನಾನು ಹೆಚ್ಚಾ? ನೀನು ಹೆಚ್ಚಾ ಎಂಬಂತೆ ಸ್ಪರ್ಧೆ ಏರ್ಪಟ್ಟಿದೆ. ಮೊನ್ನೆ ತಾನೇ ಕೇಂದ್ರಕ್ಕೆ ಎಲ್ಲ ಸಚಿವಸಂಪುಟವನ್ನು ಕರೆಸಿಕೊಂಡು ಇಲ್ಲಿನ ಸಚಿವರು, ಸಿಎಂ, ಡಿಸಿಎಂಗೆ ಟಾರ್ಗೆಟ್ ಕೊಡಲಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಇಂಡಿಕೇಟ್‍ಗೆ ತೆಲಂಗಾಣ ಚುನಾವಣಾ ಜವಾಬ್ದಾರಿ, ಸಿಂಡಿಕೇಟ್‍ಗೆ ಮಧ್ಯಪ್ರದೇಶ ಚುನಾವಣಾ ಜವಾಬ್ದಾರಿ ನೀಡಿದ ಮಾತು ಕೇಳಿಸುತ್ತಿದೆ ಎಂದು ನುಡಿದರು.
ಪ್ರತಿ ಸಚಿವರೂ ತಮ್ಮ ಸುಲಿಗೆಯ ಭಾಗವನ್ನು ಕೊಟ್ಟು ಚುನಾವಣೆ ಎದುರಿಸಲು ಸಹಕರಿಸುತ್ತಿದ್ದಾರೆ. ಇದರಿಂದ ಕರ್ನಾಟಕದ ಪ್ರತಿ ಜನರ ತಲೆಯ ಮೇಲೆ ಸುಲಿಗೆಯ ಹೊರೆ ಬೀಳುತ್ತಿದೆ ಎಂದರು. ರಾಜ್ಯದಲ್ಲಿ ಕಾಂಗ್ರೆಸ್ಸಿನ ಲೂಟಿ ಕಾರ್ಯಕ್ರಮ ಮುಂದುವರಿದಿದೆ. ಅದನ್ನು ನಾವು ಮಾತ್ರವಲ್ಲದೆ ರಾಜ್ಯದ ಜನರೆಲ್ಲರೂ ಹೇಳುತ್ತಿದ್ದಾರೆ ಎಂದು ತಿಳಿಸಿದರು.
ಬಿಜೆಪಿ ಕಾರ್ಯಕರ್ತರು ರಾಜ್ಯದ ಯಾವುದೇ ಮೂಲೆಯಲ್ಲಿ ಸೋಷಿಯಲ್ ಮೀಡಿಯದಲ್ಲಿ ಇದ್ದರೆ ಅವರ ಮೇಲೆ ನಿಗಾ ಇಡಲಾಗಿದೆ. ಟ್ರೋಲ್ ಮಾಡುವವರನ್ನು ಸುಮ್ಮನೆ ಬಿಡುವುದಿಲ್ಲ ಎಂದು ಕೆಲವು ಕಾಂಗ್ರೆಸ್ ಸಚಿವರು ಹೇಳುತ್ತಿದ್ದರು. ಉಡುಪಿ ಕೇಸಿನಲ್ಲಿ ನಮ್ಮ ಪಕ್ಷದ ಕಾರ್ಯಕರ್ತೆ ತುಮಕೂರಿನ ಶಕುಂತಳಾ ಅವರನ್ನು ಮನೆಗೆ ನುಗ್ಗಿ, ಎತ್ತಿಕೊಂಡು ಬಂದು ಕಬ್ಬನ್ ಪಾರ್ಕ್ ಸ್ಟೇಷನ್‍ನಲ್ಲಿ ಎಫ್‍ಐಆರ್ ಹಾಕಿ ಜೈಲಿಗೆ ಕಳಿಸಲು ರೆಡಿ ಮಾಡಿದ್ದರು. ನಾವು ಹೋಗಿ ಕೇಳಿದ ಮೇಲೆ ಜಾಮೀನು ಕೊಟ್ಟರು ಎಂದು ವಿವರಿಸಿದರು.
ನಿನ್ನೆ ಮಂಡ್ಯದಲ್ಲಿ ನಮ್ಮ ಕಾರ್ಯಕರ್ತರು ಪೇ ಸಿಎಸ್ ಎಂದು ಪೋಸ್ಟರ್ ಅಂಟಿಸಿದ್ದಕ್ಕೆ ಅವರ ಮೇಲೆ ಎಫ್‍ಐಆರ್ ಹಾಕಿದ್ದಾರೆ. ನಾವು ಹಿಂದೆ ಎಫ್‍ಐಆರ್ ಹಾಕಿದ್ದೇವಾ ಎಂದು ಕೇಳಿದರು. ಕಾರ್ಯಕರ್ತರಿಗೆ ಹೋರಾಟ ಮಾಡಲು ಅಧಿಕಾರ ಇಲ್ಲವೇ? ಪ್ರಜಾಪ್ರಭುತ್ವವಿರುವ ದೇಶ ಇದಲ್ಲವೇ? ಇವರೇನು ಕಮ್ಯುನಿಸ್ಟ್ ಸರಕಾರ ನಡೆಸುತ್ತಿದ್ದಾರಾ? ಎಂದು ಕೇಳಿದರು.
ಕಾಂಗ್ರೆಸ್ಸಿಗರು ಅಧಿಕಾರಕ್ಕೆ ಬಂದ ಅಮಲಿನಲ್ಲಿ ಅತಿರೇಕದ ವರ್ತನೆ ತೋರುತ್ತಿದ್ದಾರೆ. ಮನುಷ್ಯ ಕಾಲಿನಲ್ಲೇ ನಡೆಯಬೇಕು. ತಲೆಯಲ್ಲಿ ನಡೆದರೆ ಮುಳ್ಳು ಚುಚ್ಚುತ್ತದೆ. ಸಿಎಂ, ಡಿಸಿಎಂ, ಸಚಿವರು ಎಚ್ಚರಿಕೆಯಿಂದ ಇರಬೇಕು ಎಂದು ಸಲಹೆ ನೀಡಿದರು. ಪೊಲೀಸ್ ಇಲಾಖೆಯು ಬುದ್ಧಿ ಹೇಳಲಿ; ಆದರೆ, ಭಯಭೀತರನ್ನಾಗಿ ಮಾಡಿಸಿ ಬಿಜೆಪಿ ಕಾರ್ಯಕರ್ತರನ್ನು ಹದ್ದುಬಸ್ತಿಗೆ ತಂದುಬಿಡುತ್ತೇವೆ ಎಂದು ಯೋಚಿಸದಿರಿ. ಅದೆಲ್ಲ ನಿಮ್ಮ ಕೈಯಿಂದಾಗದು ಎಂದು ಎಚ್ಚರಿಸಿದರು.
ಅತಿರೇಕಕ್ಕೆ ಹೋದರೆ ಪೊಲೀಸ್ ಉನ್ನತಾಧಿಕಾರಿಗಳ ಕಚೇರಿ ಮುಂದೆ ನಾವು ಹೋರಾಟ ಮಾಡುತ್ತೇವೆ ಎಂದು ತಿಳಿಸಿದರು. ಎಸ್.ಸಿ.ಎಸ್.ಪಿ.-ಟಿ.ಎಸ್.ಪಿ.ಯ 11 ಸಾವಿರ ಕೋಟಿ ರೂಪಾಯಿಯನ್ನು ಗ್ಯಾರಂಟಿಗಳಿಗೆ ಬಳಸಲಾಗುತ್ತಿದೆ. ಇದನ್ನು ಆರಂಭದಲ್ಲಿ ಅಲ್ಲಗಳೆದರೂ ಬಳಿಕ ಒಪ್ಪಿಕೊಂಡಿದ್ದಾರೆ. ಇದೆಂಥ ನಡೆ? ಜಾತಿ ಕೇಳಬಾರದು ಎಂದು ಒಂದೆಡೆ ಹೇಳಿದರೆ ಜಾತಿ ಕೇಳಿ ಬಸ್ ಹತ್ತಿಸುವುದಾದರೆ ಇದಕ್ಕಿಂತ ದುರ್ನಡತೆ ಬೇರೊಂದಿಲ್ಲ. ಪರಿಶಿಷ್ಟ ಜಾತಿ, ವರ್ಗದವರನ್ನು ಅನ್ಯ ಜಾತಿಯವರ ಮುಂದೆ ಹರಾಜಿಗೆ ಇಡುತ್ತಿದ್ದೀರಾ ಎಂದು ಪ್ರಶ್ನಿಸಿದರು. ನಿಮ್ಮ ಕ್ರಮ ಸಹಿಸಲಾಗದು. 11 ಸಾವಿರ ಕೋಟಿ ಹಣವನ್ನು ಗ್ಯಾರಂಟಿ ಯೋಜನೆಗೆ ಬಳಸಬಾರದು. ನಿಗದಿತ ಉದ್ದೇಶಕ್ಕೇ ಬಳಸಿ ಎಂದು ಆಗ್ರಹಿಸಿದರು.