ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಂಡಿಯನ್ ಪ್ರೀಮಿಯರ್ ಲೀಗ್ (IPL) ಸೀಸನ್ 19ಕ್ಕೆ ಮುನ್ನ, ಕ್ರಿಕೆಟ್ ಅಭಿಮಾನಿಗಳಲ್ಲಿ ಕಾದಾಟ ಶುರುವಾಗಿದೆ. ಆದರೆ ಈ ಬಾರಿ ಮೈದಾನದಲ್ಲಿ ಅಲ್ಲ, ಬದಲಾಗಿ ಫ್ರಾಂಚೈಸಿ ಖರೀದಿಯ ಹೋರಾಟದಲ್ಲಿ! ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಮಾಲೀಕತ್ವ ಯಾರಿಗೆ ಸಿಗಲಿದೆ ಎಂಬ ಕುತೂಹಲ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.
ಈ ಪೈಪೋಟಿಯಲ್ಲಿ ಹೊಸ ಹೆಸರುಗಳಾಗಿ ಕರ್ನಾಟಕದ ಹೆಸರಾಂತ ಉದ್ಯಮಿಗಳಾದ ಝೆರೋಧಾ ಸಂಸ್ಥಾಪಕ ನಿಖಿಲ್ ಕಾಮತ್ ಹಾಗೂ ಮಣಿಪಾಲ್ ಗ್ರೂಪ್ ಅಧ್ಯಕ್ಷ ರಂಜನ್ ಪೈ ಸೇರಿದ್ದಾರೆ. ವರದಿಗಳ ಪ್ರಕಾರ, ಈ ಇಬ್ಬರೂ ಆರ್‌ಸಿಬಿ ಫ್ರಾಂಚೈಸಿ ಖರೀದಿಗೆ ಆಸಕ್ತಿ ತೋರಿದ್ದು, ಬೆಂಗಳೂರಿನ ತಂಡವನ್ನು ಕರ್ನಾಟಕದಲ್ಲೇ ಉಳಿಸುವ ಉದ್ದೇಶ ಹೊಂದಿದ್ದಾರೆ.
ನಿಖಿಲ್ ಕಾಮತ್ ಅವರ ಆಪ್ತರೆನಿಸಿರುವ ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಸಿಇಒ ಆದಾರ್ ಪೂನವಾಲಾ ಸಹ ಈ ಬಿಡ್ಡಿಂಗ್‌ನಲ್ಲಿ ಭಾಗವಹಿಸುವ ಸಾಧ್ಯತೆ ಇದೆ. ಹೀಗಾಗಿ ನಿಖಿಲ್–ರಂಜನ್ ಪೈ–ಪೂನವಾಲಾ ತ್ರಯ ಒಟ್ಟಾಗಿ ತಂಡವನ್ನು ಖರೀದಿಸುವ ಸಾಧ್ಯತೆಗಳು ಹೆಚ್ಚಾಗಿವೆ.
ಮತ್ತೊಂದೆಡೆ, ಡೆಲ್ಲಿ ಕ್ಯಾಪಿಟಲ್ಸ್ ಸಹ ಮಾಲೀಕರಾದ ಪಾರ್ಥ್ ಜಿಂದಾಲ್ ಅವರ ಜೆಎಸ್‌ಡಬ್ಲ್ಯು ಗ್ರೂಪ್ ಸಹ ಆರ್‌ಸಿಬಿ ಖರೀದಿಗೆ ಬಯಸಿದೆ ಎಂದು ಮೂಲಗಳು ತಿಳಿಸಿವೆ. ಜೊತೆಗೆ ಅದಾನಿ ಗ್ರೂಪ್ ಕೂಡ ಐಪಿಎಲ್‌ಗೆ ನೇರ ಪ್ರವೇಶ ಪಡೆಯಲು ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಗೆ ಬಿಡ್ ಮಾಡಲು ಸಜ್ಜಾಗಿದೆ.
ಈ ಪೈಪೋಟಿಗೆ ಇನ್ನೂ ಕೆಲವು ಅಂತಾರಾಷ್ಟ್ರೀಯ ಹೂಡಿಕೆದಾರರು ಸೇರಿದ್ದಾರೆ. ದೇವಯಾನಿ ಇಂಟರ್‌ನ್ಯಾಷನಲ್ ಗ್ರೂಪ್ ಹಾಗೂ ಅಮೆರಿಕದ ಒಂದು ಪ್ರೈವೇಟ್ ಇನ್‌ವೆಸ್ಟ್‌ಮೆಂಟ್ ಕಂಪೆನಿ ಡಿಯಾಜಿಯೋ ಸಂಸ್ಥೆಯೊಂದಿಗೆ ಮಾತುಕತೆ ನಡೆಸುತ್ತಿದೆ ಎಂಬ ವರದಿಯೂ ಬಂದಿದೆ.
ಅಂದರೆ, ದಿನದಿಂದ ದಿನಕ್ಕೆ ಆರ್‌ಸಿಬಿ ಫ್ರಾಂಚೈಸಿಗಾಗಿ ಆಸಕ್ತಿ ತೋರಿಸುತ್ತಿರುವ ಬಿಲಿಯನೇರ್‌ಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಈ ಬಾರಿ ತಂಡದ ಮಾಲೀಕತ್ವಕ್ಕಾಗಿ ನಿಜಕ್ಕೂ ಭರ್ಜರಿ ಪೈಪೋಟಿ ಕಾದಿದೆ. ಯಾವ ಉದ್ಯಮಿ ಅಂತಿಮವಾಗಿ “ಈ ಸಲ ಕಪ್ ನಮ್ದೇ” ಅಂತ ಹೇಳ್ತಾರೋ ಎಂಬ ಕುತೂಹಲ ಈಗ ಕ್ರಿಕೆಟ್ ಅಭಿಮಾನಿಗಳ ನಡುವೆ ತಾರಕಕ್ಕೇರಿದೆ.

