ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಬಳ್ಳಾರಿ ಬ್ಯಾನರ್ ಗಲಾಟೆ ಪ್ರಕರಣದಲ್ಲಿ ಮೃತಪಟ್ಟ ರಾಜಶೇಖರ ರೆಡ್ಡಿ ಕುಟುಂಬಕ್ಕೆ 25 ಲಕ್ಷ ಪರಿಹಾರ ಮತ್ತು ಮನೆ ನಿರ್ಮಾಣ ಭರವಸೆ ನೀಡಿದ್ದ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹ್ಮದ್ ಖಾನ್ ಗೆ ಕಂಟಕ ಎದುರಾಗಿದೆ.
ಪರಿಹಾರ ನೀಡಿರುವುದನ್ನು ಪ್ರಶ್ನಿಸಿ ಸಚಿವ ಜಮೀರ್ ಅಹ್ಮದ್ ಖಾನ್ ವಿರುದ್ಧ ಆದಾಯ ತೆರಿಗೆ ಇಲಾಖೆಗೆ ದೂರು ದಾಖಲಾಗಿದೆ.
ಬಳ್ಳಾರಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತ ರಾಜಶೇಖರ ರೆಡ್ಡಿ ಶೂಟೌಟ್‌ನಲ್ಲಿ ಸಾವನ್ನಪ್ಪಿದ ಹಿನ್ನೆಲೆ, ನಗದು ರೂಪದಲ್ಲಿ ಇಷ್ಟು ದೊಡ್ಡ ಮೊತ್ತವನ್ನು ನೀಡಿರುವುದು RBI ನಿಯಮಾವಳಿಗಳ ಉಲ್ಲಂಘನೆ ಎಂದು ಆರೋಪಿಸಲಾಗಿದೆ.
RBI ಹಾಗೂ ಆದಾಯ ತೆರಿಗೆ ಕಾಯ್ದೆಗಳ ಪ್ರಕಾರ, 2 ಲಕ್ಷಕ್ಕಿಂತ ಹೆಚ್ಚು ಮೊತ್ತವನ್ನು ನಗದು ರೂಪದಲ್ಲಿ ವ್ಯವಹರಿಸುವುದು ನಿಯಮಬಾಹಿರ ಎನ್ನಲಾಗಿದೆ. ಆದರೆ ಸಚಿವರು ಸುಮಾರು 25 ಲಕ್ಷ ಹಣವನ್ನು ನಗದು ರೂಪದಲ್ಲೇ ನೀಡಿರುವುದರಿಂದ ಕಾನೂನು ಉಲ್ಲಂಘನೆಯಾಗಿದೆ ಎಂದು ಆರೋಪಿಸಲಾಗಿದೆ.
ಹಿಂದೂಪರ ಸಂಘಟನೆ ಕಾರ್ಯಕರ್ತ ತೇಜಸ್ ಗೌಡ ಅವರು ಈ ಕುರಿತು ಆದಾಯ ತೆರಿಗೆ ಇಲಾಖೆಗೆ ಅಧಿಕೃತ ದೂರು ಸಲ್ಲಿಸಿದ್ದು, ಸಚಿವ ಜಮೀರ್ ಅಹ್ಮದ್ ಖಾನ್ ಅವರು ಮೃತ ಕುಟುಂಬಕ್ಕೆ ಅಂದಾಜು 25 ಲಕ್ಷ ನಗದು ನೆರವು ನೀಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಈ ಪ್ರಕರಣದ ಕುರಿತು ಐಟಿ ಇಲಾಖೆ ಪರಿಶೀಲನೆ ನಡೆಸಬೇಕೆಂದು ಅವರು ಆಗ್ರಹಿಸಿದ್ದಾರೆ.

