ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಳೆದ ಕೆಲವು ತಿಂಗಳುಗಳಲ್ಲಿ 200 ಕ್ಕೂ ಹೆಚ್ಚು ಅಕ್ರಮ ಬಾಂಗ್ಲಾದೇಶಿ ವಲಸಿಗರನ್ನು ರಾಜ್ಯದಿಂದ ಗಡೀಪಾರು ಮಾಡಲಾಗಿದೆ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ ಹೇಳಿದ್ದಾರೆ.
ನಿರ್ಮಾಣ ಕಾರ್ಮಿಕರಾಗಿ ಕೆಲಸ ಮಾಡುತ್ತಿರುವ ಇಂತಹ ಅನೇಕ ವಲಸಿಗರ ವಿರುದ್ಧ ದೂರುಗಳು ಬಂದಿವೆ ಎಂದರು. ರಾಜ್ಯ ಸರ್ಕಾರವು ಅಕ್ರಮ ವಲಸಿಗರನ್ನು ತಕ್ಷಣ ಗಡೀಪಾರು ಮಾಡಲು ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಇದು ನಿರಂತರ ಪ್ರಕ್ರಿಯೆ ಎಂದು ತಿಳಿಸಿದ್ದಾರೆ.
ಪ್ರಾದೇಶಿಕ ನೋಂದಣಿ ಕಚೇರಿಯ ಅಧಿಕಾರಿಗಳು ಅಂತಹ ಅಕ್ರಮ ವಲಸಿಗರನ್ನು ಗುರುತಿಸಿ ಪೊಲೀಸರಿಗೆ ತಿಳಿಸುತ್ತಾರೆ ಎಂದು ಅವರು ಹೇಳಿದರು. “ನಾವು ನಿರ್ಮಾಣ ಕಾರ್ಮಿಕರ ಮೇಲೆ ನಿಗಾ ಇಡುತ್ತಿದ್ದೇವೆ… ಅವರು ಅಕ್ರಮ ವಲಸಿಗರೆಂದು ಕಂಡುಬಂದರೆ, ಅವರನ್ನು ಗಡೀಪಾರು ಮಾಡಲಾಗುತ್ತದೆ ಎಂದರು.
ಸರ್ಕಾರ ಅಕ್ರಮ ವಲಸಿಗರ ಬಗ್ಗೆ ಮೃದು ಧೋರಣೆ ತಳೆಯುವುದಿಲ್ಲ. ಕಾಂಗ್ರೆಸ್ ಅಂತಹ ಅಕ್ರಮ ವಲಸಿಗರನ್ನು ಮತಬ್ಯಾಂಕ್ ಆಗಿ ಬಳಸುತ್ತದೆ ಎಂಬ ಆರೋಪದ ಕುರಿತು ಪ್ರತಿಕ್ರಿಯಿಸಿದ, ಡಾ. ಪರಮೇಶ್ವರ್, ಚುನಾವಣೆಯಲ್ಲಿ ಗೆಲ್ಲಲು ಅಕ್ರಮ ವಲಸಿಗರ ಮತಗಳ ಅಗತ್ಯವಿರುವ ಪರಿಸ್ಥಿತಿಯಲ್ಲಿ ಪಕ್ಷ ಎಂದಿಗೂ ಇರಲಿಲ್ಲ ಎಂದು ಹೇಳಿದರು