ಹೊಸದಿಗಂತ ಡಿಜಿಟಲ್ ಡೆಸ್ಕ್:
ಗಂಗಾ ಕಲ್ಯಾಣ ಕೊಳವೆ ಬಾವಿ ವಿದ್ಯುದೀಕರಣಕ್ಕೆ 1948 ಅರ್ಜಿಗಳು ಬಾಕಿ ಉಳಿದಿದ್ದು, ಎರಡು ತಿಂಗಳಲ್ಲಿ ಪೂರ್ಣಗೊಳಿಸಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟ ಸೂಚನೆ ನೀಡಿದರು.
ಇಂದು ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಮುಂದುವರೆದ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಸಭೆಯಲ್ಲಿ, ಎಸ್ಕಾಂಗಳು ವಿದ್ಯುಚ್ಛಕ್ತಿ ಸಂಪರ್ಕ ಒದಗಿಸುವುದಕ್ಕೆ ಅನಗತ್ಯ ವಿಳಂಬ ಮಾಡಕೂಡದು. ಶುಲ್ಕ ಪಾವತಿಸಿಲ್ಲ ಎಂದು ಬಾಕಿ ಉಳಿಸಿಕೊಳ್ಳಬಾರದು. ಇದಕ್ಕೆ ಟ್ರಾನ್ಸ್ಫಾರ್ಮರ್ ಗಳು ಇಲ್ಲ, ಕಂಬಗಳಿಲ್ಲ ಎಂಬ ನೆಪಗಳನ್ನು ಹೇಳಬಾರದು ಎಂದು ಇಂಧನ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
ಜೆಸ್ಕಾಂ ಮತ್ತು ಹೆಸ್ಕಾಂ ಗಳಲ್ಲಿ ಬಾಕಿ ಅರ್ಜಿಗಳ ಸಂಖ್ಯೆ ಹೆಚ್ಚಿರುವುದನ್ನು ಪರಿಶೀಲಿಸಿದ ಮುಖ್ಯಮಂತ್ರಿಗಳು ಅಭಿಯಾನ ಕೈಗೆತ್ತಿಕೊಂಡು ವಿದ್ಯುದೀಕರಣ ಕೈಗೊಳ್ಳಲು ಸೂಚಿಸಿದರು.
ಗಂಗಾ ಕಲ್ಯಾಣ ಯೋಜನೆಯಡಿ ಬೋರ್ ವೆಲ್ ಕೊರೆಯುವುದು ಹಾಗೂ ವಿದ್ಯುದೀಕರಣದಲ್ಲಿ ಅನಗತ್ಯವಾಗಿ ವಿಳಂಬ ಮಾಡಬಾರದು. ಬಾಕ್ಸ್ ಜೇಬಲ್ಲಿ ಇಟ್ಕೊಂಡು ಏನ್ ಮಾಡ್ತಾ ಇದೀರ? ವಿದ್ಯುತ್ ಉಪಕೇಂದ್ರ ಆರಂಭಿಸಲು ಮತ್ತು ಟ್ರಾನ್ಸ್ ಫಾರ್ಮರ್ ಲೈನ್ ಗೆ ಭೂಮಿ ಒದಗಿಸುವಂತೆ ಎಷ್ಟು ಅರ್ಜಿಗಳು ಬಂದಿವೆ ಎಂದು ಮುಖ್ಯಮಂತ್ರಿಗಳು ಪ್ರಶ್ನಿಸಿದರು. ಇದಕ್ಕೆ ಅಧಿಕಾರಿಯೊಬ್ಬರ ಉತ್ತರದಿಂದ ಅಸಮಾಧಾನಗೊಂಡ ಸಿಎಂ ಆ ಅರ್ಜಿಗಳನ್ನು ಜೇಬಿನಲ್ಲಿ ಇಟ್ಕೊಂಡು ಏನ್ ಮಾಡ್ತಾ ಇದೀರ ಮೊದಲು ಆ ಎಲ್ಲಾ ಅರ್ಜಿಗಳ ಬೇಡಿಕೆ ಪೂರ್ಣಗೊಳಿಸಿ ಎಂದು ಸೂಚಿಸಿದರು.