ಹೊಸದಿಗಂತ ವರದಿ, ಕಾರವಾರ:
ಶಿರಸಿ-ಕುಮಟಾ ಹೆದ್ದಾರಿ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸಿ ಸುಗಮ ಸಂಚಾರಕ್ಕೆ ವ್ಯವಸ್ಥೆ ಮಾಡುವಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಸುಷಮಾ ಗೋಡಬೋಲೆ ಸೂಚಿಸಿದರು.
ಅವರು ಗುರುವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಪ್ರಸ್ತುತ ಮಳೆಯ ಕಾರಣದಿಂದ ಬೆಣ್ಣೆಹೊಳೆ ಸೇತುವೆ ಬಳಿ ನಿರ್ಮಿಸಿದ ತಾತ್ಕಾಲಿಕ ರಸ್ತೆ ಕೊಚ್ಚಿ ಹೋಗಿದ್ದು, ಶಾಲೆಗಳು ಆರಂಭವಾಗುವ ಕಾರಣ ವಿದ್ಯಾರ್ಥಿಗಳ ಮತ್ತು ಸಾರ್ವಜನಿಕರಿಗೆ ಸಂಚಾರಕ್ಕೆ ಅನುಕೂಲವಾಗುವಂತೆ ೨ ದಿನದಲ್ಲಿ ಈ ರಸ್ತೆಯನ್ನು ಅತ್ಯಂತ ವ್ಯವಸ್ಥಿತವಾಗಿ ಮರು ನಿರ್ಮಾಣ ಮಾಡುವಂತೆ ಸೂಚನೆ ನೀಡಿದರು.
ಜಿಲ್ಲೆಯ ಹೆದ್ದಾರಿಗಳಲ್ಲಿ ನಿಗದಿಗಿಂತ ಅಧಿಕ ಭಾರದ ಸರಕುಗಳನ್ನು ಹೊಂದಿರುವ ವಾಹನಗಳ ಸಂಚಾರದಿಂದ ಸೇತುವೆಗಳಿಗೆ ಹಾನಿಯಾಗುವ ಸಾಧ್ಯತೆಯಿದ್ದು, ಇದನ್ನು ನಿಯಂತ್ರಿಸಲು ಜಿಲ್ಲೆಯ ಗಡಿ ಭಾಗದಲ್ಲಿಯೇ ಇಂತಹ ಅಧಿಕ ಭಾರದ ವಾಹನಗಳನ್ನು ಪ್ರತಿ ದಿನ ಪರಿಶೀಲಸಿ ಅವುಗಳನ್ನು ಗಡಿಭಾಗದಲ್ಲಿಯೇ ತಡೆಹಿಡಿದು ದೂರು ದಾಖಲಿಸುವಂತೆ ಮತ್ತು ಈ ಬಗ್ಗೆ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆಗೆ ಪ್ರತೀ ವಾರ ವರದಿ ನೀಡುವಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಆರೋಗ್ಯ ಇಲಾಖೆವತಿಯಿಂದ ಕೊರೋನಾ ಕುರಿತಂತೆ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆ ತಿಳಿಸಿದ ಅವರು, ಜಿಲ್ಲೆಯಲ್ಲಿ ಸಿಸೇರಿಯನ್ ಹೆರಿಗೆಗಳ ಸಂಖ್ಯೆ ಅಧಿಕವಾಗಿದ್ದು , ಸಹಜ ಹೆರಿಗೆಯ ಕುರಿತಂತೆ ಗರ್ಭಿಣಿಯರಿಗೆ ವಿಶೇಷ ಅರಿವು ಮತ್ತು ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸುವಂತೆ ತಿಳಿಸಿದರು.