ಕೊಡಗಿನ ವಿವಿಧ ಸಹಕಾರ ಸಂಘಗಳಿಗೆ ಡಿಸಿಸಿ ಬ್ಯಾಂಕ್’ನಿಂದ ಕಂಪ್ಯೂಟರ್- ಪ್ರಿಂಟರ್ ವಿತರಣೆ

ಹೊಸದಿಗಂತ ವರದಿ, ಮಡಿಕೇರಿ
ಕೊಡಗು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ವತಿಯಿಂದ ಸಹಕಾರ ಸಂಘಗಳಿಗೆ ಮೂಲಭೂತ ಸೌಕರ್ಯ ಅಭಿವೃದ್ಧಿಗೆ ಉಚಿತವಾಗಿ ನೀಡಲಾಗುತ್ತಿರುವ ಎಲೆಕ್ಟ್ರಾನಿಕ್ ಉಪಕರಣಗಳ ಸದುಪಯೋಗವನ್ನು ಎಲ್ಲಾ ಸಹಕಾರ ಬ್ಯಾಂಕ್‍ಗಳು ಪಡೆದುಕೊಳ್ಳುವಂತೆ ಸರ್ಕಾರಿ ಜಮೀನುಗಳ ಸಂರಕ್ಷಣಾ ಸಮಿತಿ ಅಧ್ಯಕ್ಷ ಹಾಗೂ ಶಾಸಕ ಕೆ.ಜಿ.ಬೋಪಯ್ಯ ಅವರು ಹೇಳಿದರು.
ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಹಾಗೂ ಅಪೆಕ್ಸ್ ಬ್ಯಾಂಕಿನ ನಿರ್ದೇಶಕರ ಅನುದಾನದಿಂದ ಸಹಕಾರ ಸಂಘಗಳಿಗೆ ಮೂಲಭೂತ ಸೌಕರ್ಯ ಅಭಿವೃದ್ಧಿಗಾಗಿ ನಗರದ ಕೊಡವ ಸಮಾಜದಲ್ಲಿ ಏರ್ಪಡಿಸಲಾಗಿದ್ದ ಎಲೆಕ್ಟ್ರಾನಿಕ್ ಉಪಕರಣ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಫ್ರೂಟ್ಸ್ ಆ್ಯಪ್ ತಂತ್ರಾಂಶವನ್ನು ಸರ್ಕಾರ ರೈತರ ಒಳಿತಿಗಾಗಿ ಜಾರಿಗೊಳಿಸಿದೆ. ಇದು ಕೇಂದ್ರ ಸರ್ಕಾರದ ಯೋಜನೆ ಆಗಿದ್ದು, ಯಾವುದೇ ರೀತಿಯ ಅವ್ಯವಹಾರಗಳು ನಡೆಯಬಾರದು ಎಂಬ ದೃಷ್ಟಿಕೋನದಿಂದ ಫ್ರೂಟ್ಸ್ ತಂತ್ರಾಂಶ ಜಾರಿಗೊಳಿಸಿದೆ ಎಂದು ಅವರು ಹೇಳಿದರು.
ಡಿಸಿಸಿ ಬ್ಯಾಂಕ್ ಅನ್ನು ಅಪೆಕ್ಸ್ ಬ್ಯಾಂಕಿಗೆ ವಿಲೀನ ಮಾಡಬೇಕೆಂಬ ಚರ್ಚೆ ಬಗ್ಗೆ ಪ್ರತಿಕ್ರಿಯಿಸಿದ ಶಾಸಕರು, ರೈತರ/ಜನರ ವಿರುದ್ಧವಾಗಿ ಯಾವುದೇ ಯೋಜನೆಗಳನ್ನು ಜಾರಿಗೊಳಿಸುವುದಿಲ್ಲ. ಸರ್ಕಾರದ ಜೊತೆ ಈ ಸಂಬಂಧ ಚರ್ಚೆ ನಡೆಸಲಾಗುವುದು ತಿಳಿಸಿದರು.
ವಿಧಾನ ಪರಿಷತ್ ಸದಸ್ಯ ಸುಜಾಕುಶಾಲಪ್ಪ, ಕರ್ನಾಟಕ ರಾಜ್ಯ ಪಶ್ಚಿಮ ಘಟ್ಟಗಳ ಸಂರಕ್ಷಣಾ ಕಾರ್ಯಪಡೆ ಸಮಿತಿ ಅಧ್ಯಕ್ಷ ರವಿಕುಶಾಲಪ್ಪ ಹಾಗೂ ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ ಅಧ್ಯಕ್ಷ ಕೊಡಂದೇರ ಪಿ.ಗಣಪತಿ ಅವರು ಕಾರ್ಯಕ್ರಮದಲ್ಲಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಜಿಲ್ಲೆಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ಪ್ರಸ್ತುತ ಫ್ರೂಟ್ ತಂತ್ರಾಂಶದ ಮೂಲಕ ಬೆಳೆ ಸಾಲ ವಿತರಣೆ ಮಾಡುವ ಕ್ರಮದಿಂದ ಎದುರಿಸುತ್ತಿರುವ ಸಂಕಷ್ಟಗಳನ್ನು ಸಭೆ ಆಲಿಸಿ, ಸದಸ್ಯ ಸಹಕಾರ ಸಂಘಗಳ ಸಂಕಷ್ಟವನ್ನು ಅರಿತು ಜಿಲ್ಲೆಯ ಎಲ್ಲಾ ಸಹಕಾರ ಸಂಘಗಳ ಪರವಾಗಿ ಜಿಲ್ಲಾ ಬ್ಯಾಂಕಿನ ಅಧ್ಯಕ್ಷರು ರಾಜ್ಯದ ಸಹಕಾರ ಸಚಿವರಿಗೆ ಮನವಿ ನೀಡುವಂತೆ ತೀರ್ಮಾನಿಸಲಾಯಿತು.ಬ್ಯಾಂಕಿನ ಉಪಾಧ್ಯಕ್ಷ ಕೆಟೋಳಿರ ಹರೀಶ್ ಪೂವಯ್ಯ, ನಿರ್ದೇಶಕರಾದ ಬಿ.ಕೆ. ಚಿಣ್ಣಪ್ಪ, ಪಟ್ರಪಂಡ ಬಿ. ರಘುನಾಣಯ್ಯ, ಹೊಟ್ಟೆಂಗಡ ಎಂ ರಮೇಶ್, ಹೊಸೂರು ಜೆ ಸತೀಶ್‍ಕುಮಾರ್, ಕಿಮ್ಮುಡೀರ ಎ ಜಗದೀಶ್, ಅರುಣ್ ಭೀಮಯ್ಯ, ಎ.ಗೋಪಾಲಕೃಷ್ಣ, ಪ್ರಧಾನ ವ್ಯವಸ್ಥಾಪಕಿ ಎ.ಎಸ್.ಪಾರ್ವತಿ ಉಪಸ್ಥಿತರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!