ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಕ್ಕಳ ಕಳ್ಳಸಾಗಣೆ ಮತ್ತು ನಾಪತ್ತೆ ಪ್ರಕರಣಗಳ ಬಗ್ಗೆ ಕಳವಳಗಳು ಹೆಚ್ಚಾಗುತ್ತಿದ್ದು, ಇದರ ಬೆನ್ನಲ್ಲೇ ಕಾಣೆಯಾದ ಮತ್ತು ಅಪಹರಿಸಲ್ಪಟ್ಟ ಮಕ್ಕಳ ಪತ್ತೆಗೆ ಜಿಲ್ಲಾ ಮಟ್ಟದಲ್ಲಿ ವಿಶೇಷ ಕಾರ್ಯಾಪಡೆಗಳನ್ನು ರಾಜ್ಯ ಸರ್ಕಾರ ರಚನೆ ಮಾಡಿದೆ.
ಜೂನ್ 20 ರಂದು ನಡೆದ ಸಭೆಯಲ್ಲಿ ಈ ಮಕ್ಕಳ ನಾಪತ್ತೆ ಹಾಗೂ ಕಳ್ಳಸಾಗಣೆ ವಿಚಾರ ಪ್ರಸ್ತಾಪವಾಗಿತ್ತು. ಶಾಸಕಾಂಗ ಸಮಿತಿಯ ಸೂಚನೆ ಮೇರೆಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಈ ನಿರ್ಧಾರ ತೆಗೆದುಕೊಂಡಿದೆ.
ರಾಜ್ಯದಲ್ಲಿ ಹಲವಾರು ಮಕ್ಕಳನ್ನು ಅಪಹರಿಸುವ ಮತ್ತು ಕಾಣೆಯಾಗುವ ಪ್ರಕರಣಗಳು ವರದಿಯಾಗಿವೆ. ಅಂತಹ ಪ್ರಕರಣಗಳು ಮಕ್ಕಳ ಹಕ್ಕುಗಳ ಗಂಭೀರ ಉಲ್ಲಂಘನೆಯಾಗಿದೆ ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.
ಈ ಬೆಳವಣಿಗೆಯನ್ನು ತಡೆಗಟ್ಟಲು ಮತ್ತು ದುರ್ಬಲ ಮಕ್ಕಳನ್ನು ರಕ್ಷಿಸಲು ಸಂಘಟಿತ ಮತ್ತು ಜವಾಬ್ದಾರಿಯುತ ಪ್ರತಿಕ್ರಿಯೆಯನ್ನು ಖಚಿತಪಡಿಸಿಕೊಳ್ಳುವುದು ಈ ಕಾರ್ಯಪಡೆಯ ಗುರಿಯಾಗಿದೆ.
ಜಿಲ್ಲೆಗಳ ಪೊಲೀಸ್ ಮುಖ್ಯಸ್ಥರು ಈ ಕಾರ್ಯಪಡೆಯ ಅಧ್ಯಕ್ಷರಾಗಿರುತ್ತಾರೆ ವಿವಿಧ ಇಲಾಖೆಗಳಿಂದ 10 ಸದಸ್ಯರು ಕಾರ್ಯಪಡೆಯಲ್ಲಿರಲಿದ್ದಾರೆ. ಜಿಲ್ಲಾ ಮಕ್ಕಳ ರಕ್ಷಣಾ ಅಧಿಕಾರಿ ಸದಸ್ಯ ಕಾರ್ಯದರ್ಶಿಯಾಗಿರುತ್ತಾರೆ.
ಮಕ್ಕಳ ಅಪಹರಣ ಮತ್ತು ಕಾಣೆಯಾದ ಮಕ್ಕಳ ಪ್ರಕರಣಗಳ ಪ್ರಗತಿಯನ್ನು ಪರಿಶೀಲಿಸಲು ಕಾರ್ಯಪಡೆ ಪ್ರತಿ ತಿಂಗಳು ಸಭೆ ಸೇರಲಿದ್ದು, ಜಿಲ್ಲಾ ಮಕ್ಕಳ ರಕ್ಷಣಾ ಅಧಿಕಾರಿಗಳು ಪ್ರತಿ ತಿಂಗಳ ಅಂತ್ಯದೊಳಗೆ ಮಕ್ಕಳ ರಕ್ಷಣಾ ನಿರ್ದೇಶನಾಲಯಕ್ಕೆ ವರದಿಗಳನ್ನು ಕಡ್ಡಾಯ ಸಲ್ಲಿಸಬೇಕಾಗುತ್ತದೆ.
ಸಭೆಗಳ ಸಮಯದಲ್ಲಿ ಕಾರ್ಯಪಡೆಯು ಕಾಣೆಯಾದ ಮಕ್ಕಳ ಪೋಷಕರನ್ನು ಕರೆಸಿ, ಮಕ್ಕಳನ್ನು ಪತ್ತೆಹಚ್ಚಲು ಸಹಾಯ ಮಾಡುವ ಹೆಚ್ಚುವರಿ ಮಾಹಿತಿಯನ್ನು ಸಂಗ್ರಹಿಸಬೇಕು. ಈ ಕಾರ್ಯಪಡೆಯು ಬಾಧಿತ ಕುಟುಂಬಗಳಿಗೆ ಸಮಾಲೋಚನೆ, ನೈತಿಕ ಬೆಂಬಲ ಮತ್ತು ಮಾನಸಿಕ ನೆರವು ನೀಡುವ ಜವಾಬ್ದಾರಿಯನ್ನು ಹೊಂದಿದೆ.