ಹೊಸದಿಗಂತ ವರದಿ, ಚಿತ್ರದುರ್ಗ:
ರಾಜ್ಯಸಭೆ ಚುನಾವಣೆಯ ನಂತರ ಡಾ.ಸೈಯದ್ ನಾಸಿರ್ ಹುಸೇನ್ ಬೆಂಬಲಿಗರು ವಿಧಾನಸೌಧದಲ್ಲಿ ಪಾಕಿಸ್ತಾನ ಜಿಂದಾಬಾದ್ ಎಂದು ಕೂಗಿರುವುದನ್ನು ಖಂಡಿಸಿ ಬಿಜೆಪಿ ಪಕ್ಷದ ವತಿಯಿಂದ ನಗರದಲ್ಲಿ ಬುಧವಾರ ಪ್ರತಿಭಟನೆ ನಡೆಸಲಾಯಿತು. ಇದಕ್ಕೆ ಪ್ರತಿಯಾಗಿ ಕಾಂಗ್ರೆಸ್ ಪಕ್ಷದ ಮುಖಂಡರು ಬಿಜೆಪಿ ವಿರುದ್ದ ಘೋಷಣೆಗಳನ್ನು ಕೂಗಿ ಪ್ರತಿರೋಧ ವ್ಯಕ್ತಪಡಿಸಿದರು.
ಕರ್ನಾಟಕ ರಾಜ್ಯದಲ್ಲಿದ್ದುಕೊಂಡ ಶತೃರಾಷ್ಟ್ರವಾದ ಪಾಕಿಸ್ತಾನದ ಪರವಾಗಿ ಜಿಂದಾಬಾದ್ ಎಂದು ಕೂಗಿರುವುದನ್ನು ವಿರೋಧಿಸಿ ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ಕಚೇರಿಗೆ ಮುತ್ತಿಗೆ ಹಾಕುವ ಪ್ರಯತ್ನ ಮಾಡಿದರು. ಇದನ್ನು ತಡೆದ ರಕ್ಷಣಾ ಇಲಾಖೆಯವರು ಪ್ರತಿಭಟನಾಕಾರರನ್ನು ಕಾಂಗ್ರೆಸ್ ಕಚೇರಿ ಮುಂದೆಯೇ ನಿಲ್ಲಿಸಿದರು. ಈ ಸಮಯದಲ್ಲಿ ಕಾಂಗ್ರೆಸ್ ಪಕ್ಷ ಹಾಗೂ ರಾಜ್ಯ ಸರ್ಕಾರದ ವಿರುದ್ದ ಘೋಷಣೆಗಳನ್ನು ಕೂಗಿದ ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ಪಕ್ಷ ಮತ್ತು ಸರ್ಕಾರ ದೇಶ ದ್ರೋಹಿಗಳಿಗೆ ಬೆಂಬಲ ನೀಡುತ್ತಿದೆ. ನಮ್ಮ ದೇಶದ ಒಳಗಡೆ ಅವರಿಗೆ ಸಹಕಾರ ನೀಡುತ್ತಿದೆ ಎಂದು ದೂರಿದರು.
ವಿಧಾನಸೌಧದಲ್ಲಿ ರಾಜ್ಯಸಭೆ ಸದಸ್ಯ ಸೈಯದ್ ನಾಸೀರ್ ಹುಸೇನ್ ಬೆಂಬಲಿಗರು ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಕೂಗಿದ್ದಾರೆ ಎಂದು ಆರೋಪಿಸಿದರು. ಕೂಡಲೇ ಸ್ಥಳಕ್ಕಾಗಮಿಸಿದ ಪೊಲೀಸರು ಕಾಂಗ್ರೆಸ್ ಕಚೇರಿ ಸುತ್ತಲೂ ಬ್ಯಾರಿಕೇಡ್ ಅಳವಡಿಸಿ ಬಿಜೆಪಿ ಕಾರ್ಯಕರ್ತರನ್ನು ತಡೆದರು. ಈ ವೇಳೆ ಬಿಜೆಪಿ ಕಾರ್ಯಕರ್ತರು, ಕಾಂಗ್ರೆಸ್ ಕಚೇರಿಯ ಎದುರಿನಲ್ಲಿ ನಿಂತ ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ಪಕ್ಷ ದೇಶದ್ರೋಹಿಗಳಿಗೆ ಬಂಬಲ ನೀಡುತ್ತಿದೆ ಎಂದು ಘೋಷಣೆಗಳನ್ನು ಕೂಗಿದರು.
ಈ ಮೊದಲು ಪಾಕಿಸ್ತಾನದ ಪರ ಘೊಷಣೆಗಳನ್ನು ರಸ್ತೆಯಲ್ಲಿ ಕೂಗುತ್ತಿದ್ದವರು ಈಗ ವಿಧಾನಸೌಧದಲ್ಲಿ ಇದ್ದಾರೆ. ಪಾಕಿಸ್ತಾನಿಯರನ್ನು ವಿಧಾನಸೌಧದ ಒಳಗೆ ಸೇರಿಕೊಂಡ ಕೀರ್ತಿ ಕಾಂಗ್ರೆಸ್ ಪಕ್ಷಕ್ಕೆ ಸಲ್ಲುತ್ತದೆ. ಬಿಟ್ಟಿ ಗ್ಯಾರೆಂಟಿ ಭಾಗ್ಯಗಳಿಗೆ ಮಾರು ಹೋಗಿ ಮತ ನೀಡಿದ ಮತದಾರರಿಗೆ ಈಗ ಸತ್ಯ ಏನೆಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಕಾಂಗ್ರೆಸ್ ಸರ್ಕಾರ ಹಿಂದೂ ವಿರೋಧಿ ನೀತಿ ಅನುಸರಿಸುತ್ತಿದೆ. ಕಾಂಗ್ರೆಸ್ ಪಕ್ಷ ಇಂತಹ ಹಲವಾರು ವಿಷ ಜಂತುಗಳನ್ನು ಸಾಕಿಕೊಂಡಿದೆ. ಸೈಯದ್ ನಾಸೀರ್ ಹುಸೇನ್ ಅವರ ಹಿಂದೆ ಇರುವ ಬೆಂಬಲಿಗರು ಪಾಕಿಸ್ತಾನಿ ಬೆಂಬಲಿತ ಉಗ್ರರೇ ಇರಬೇಕು ಎಂದು ದೂರಿದರು.
ಈ ವೇಳೆ ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ಕಚೇರಿಗೆ ನುಗ್ಗಲು ಯತ್ನಿಸಿದರು. ಕಾಂಗ್ರೆಸ್ ಪಕ್ಷ ದೇಶ ವಿರೋಧಿ ಎಂದು ಆರೋಪಿಸಿದ ಬಿಜೆಪಿ ಕಾರ್ಯಕರ್ತರು ಘೋಷಣೆಗಳನ್ನು ಕೂಗಿದರು. ಇದಕ್ಕೆ ಪ್ರತಿಕ್ರಿಯೆಯಾಗಿ ಕಾಂಗ್ರೆಸ್ ಕಾರ್ಯಕರ್ತರು ಘೋಷಣೆಗಳನ್ನು ಕೂಗಿದರು. ಈ ವೇಳೆ ಎರಡೂ ಕಡೆಗಳಲ್ಲೂ ಪ್ರತಿಭಟನೆ ತಾರಕ್ಕೇರಿತು. ಎರಡೂ ಪಕ್ಷಗಳ ಕಾರ್ಯಕರ್ತರು ಪರಸ್ಪರ ವಾಗ್ದಾಳಿ ನಡೆಸಿದರು. ಒಂದು ಹಂತದಲ್ಲಿ ಪ್ರತಿಭಟನೆ ಬೀದಿ ಜಗಳದಂತಾಯಿತು.
ಕಾಂಗ್ರೆಸ್ ಹಾಗೂ ಬಿಜೆಪಿ ಕಾರ್ಯಕರ್ತರನ್ನು ಚದುರಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು. ಪ್ರತಿಭಟನಾಕಾರರನ್ನು ನಿಯಂತ್ರಿಸಲು ಮುಂದಾದ ಪೊಲೀಸರು ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ತಳ್ಳಾಟ, ನೂಕಾಟ ನಡೆಯಿತು. ಈ ಸಂದರ್ಭದಲ್ಲಿ ಬಿಜೆಪಿ ಯುವ ಮೋರ್ಚ ರಾಜ್ಯ ಕಾರ್ಯದರ್ಶಿ ಭಾರ್ಗವಿ ದ್ರಾವಿಡ್ ಆಯತಪ್ಪಿ ನೆಲಕ್ಕೆ ಬಿದ್ದರು. ಮಹಿಳಾ ಪೊಲೀಸ್ ಪೇದೆಯೊಬ್ಬರು ಏಕಾಏಕಿ ತಳ್ಳಿದ್ದರಿಂದ ನೆಲಕ್ಕೆ ಬಿದ್ದ ಭಾರ್ಗವಿ ಕ್ಷಣ ಕಾಲ ಮೇಲೆ ಏಳಲಿಲ್ಲ. ಆನಂತರ ನೀರು ಕುಡಿಸಿ ಅಲ್ಲಿಂದ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ದು ದಾಖಲಿಸಲಾಯಿತು.
ಬಿಜೆಪಿ ಮುಖಂಡರಾದ ನರೇಂದ್ರ ಹೊನ್ನಾಳ್, ದಗ್ಗೆ ಶಿವಪ್ರಕಾಶ್, ತಿಪ್ಪೇಸ್ವಾಮಿ, ಯುವ ಮೋರ್ಚಾ ಮಂಡಲ ಅಧ್ಯಕ್ಷ ರಾಮು, ನವೀನ್, ವೀಣಾ, ಶೀಲಾ, ಶೈಲಜಾ ರೆಡ್ಡಿ, ಪವನ, ಪರಶುರಾಮ್, ಪಲ್ಲವಿ ಪ್ರಸನ್ನ, ರವಿ ಪೈಲೆಟ್, ಪ್ರಭು ಮತ್ತಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಕಾಂಗ್ರೇಸ್ ಪಕ್ಷದ ಕಾರ್ಯಾಧ್ಯಕ್ಷ ಹಾಲಸ್ವಾಮಿ, ಜಿ.ಪಂ. ಮಾಜಿ ಸದಸ್ಯ ಪ್ರಕಾಶ್‌ಮೂರ್ತಿ, ಹಿಂದುಳಿದ ವರ್ಗಗಳ ಘಟಕದ ಜಿಲ್ಲಾಧ್ಯಕ್ಷ ಎನ್.ಡಿ.ಕುಮಾರ್, ಮುದಸಿರ್, ನೇತಾಜಿ, ಲಕ್ಷ್ಮೀಕಾಂತ ಸೇರಿದಂತೆ ಇತರರು ಕಾಂಗ್ರೇಸ್ ಪಕ್ಷದಿಂದ ಪ್ರತಿಯಾಗಿ ನಡೆಸಿದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.