May 13, 2026
Wednesday, May 13, 2026
spot_img

ಸೋತರೂ ಕುಗ್ಗದ ವಿಶ್ವಾಸ: ಹೈದರಾಬಾದ್ ಪ್ಲೇಆಫ್ ಕನಸು ನನಸಾಗುತ್ತಾ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇಂಡಿಯನ್ ಪ್ರೀಮಿಯರ್ ಲೀಗ್‌ನ 56ನೇ ಹಂತದ ರೋಚಕ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡವು ಗುಜರಾತ್ ಟೈಟಾನ್ಸ್ ಎದುರು ಭಾರೀ ಅಂತರದ ಸೋಲು ಅನುಭವಿಸಿದೆ. ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಈ ಹಣಾಹಣಿಯಲ್ಲಿ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ವೈಫಲ್ಯ ಕಂಡ SRH ತಂಡವು 82 ರನ್‌ಗಳಿಂದ ಪರಾಜಯಗೊಂಡಿತು.

ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಗುಜರಾತ್ ಟೈಟಾನ್ಸ್, ನಿಗದಿತ 20 ಓವರ್‌ಗಳಲ್ಲಿ 168 ರನ್‌ಗಳ ಸವಾಲಿನ ಮೊತ್ತವನ್ನು ಕಲೆಹಾಕಿತು. ಈ ಸಾಧಾರಣ ಗುರಿಯನ್ನು ಬೆನ್ನಟ್ಟಿದ ಹೈದರಾಬಾದ್ ತಂಡವು ಗುಜರಾತ್ ಬೌಲರ್‌ಗಳ ಶಿಸ್ತಿನ ದಾಳಿಗೆ ತತ್ತರಿಸಿತು. ಕೇವಲ 14.5 ಓವರ್‌ಗಳಲ್ಲಿ 86 ರನ್‌ಗಳಿಗೆ ಸರ್ವಪತನ ಕಾಣುವ ಮೂಲಕ ಅಭಿಮಾನಿಗಳಿಗೆ ನಿರಾಸೆ ಮೂಡಿಸಿತು.

ಪಂದ್ಯದ ಮುಕ್ತಾಯದ ಬಳಿಕ ಮಾತನಾಡಿದ SRH ನಾಯಕ ಪ್ಯಾಟ್ ಕಮಿನ್ಸ್, ಸೋಲನ್ನು ಕ್ರೀಡಾ ಮನೋಭಾವದಿಂದ ಒಪ್ಪಿಕೊಂಡರು. “ಎರಡನೇ ಇನ್ನಿಂಗ್ಸ್‌ನಲ್ಲಿ ಪಿಚ್ ಬ್ಯಾಟಿಂಗ್‌ಗೆ ಅಷ್ಟೇನೂ ಪೂರಕವಾಗಿರಲಿಲ್ಲ. ಎದುರಾಳಿ ಬೌಲರ್‌ಗಳು ನಿರಂತರವಾಗಿ ‘ಬ್ಯಾಕ್ ಆಫ್ ದಿ ಲೆಂತ್’ ಎಸೆತಗಳನ್ನು ಎಸೆಯುವ ಮೂಲಕ ನಮಗೆ ಒತ್ತಡ ಹೇರಿದರು. ಟಿ20 ಕ್ರಿಕೆಟ್ ಇತಿಹಾಸದಲ್ಲೇ ಇದು ಅತ್ಯುತ್ತಮ ಬೌಲಿಂಗ್ ಪ್ರದರ್ಶನಗಳಲ್ಲಿ ಒಂದು,” ಎಂದು ಶ್ಲಾಘಿಸಿದರು.

ಅಲ್ಲದೆ, “ನಮ್ಮ ಬೌಲಿಂಗ್ ವೇಳೆ ನಾವು ಲೈನ್ ಮತ್ತು ಲೆಂತ್ ಕಾಪಾಡಿಕೊಳ್ಳುವಲ್ಲಿ ಸ್ವಲ್ಪ ಎಡವಿದೆವು. ಈ ಪಂದ್ಯದಿಂದ ನಾವು ಕಲಿಯಬೇಕಾದ ಪಾಠ ಸಾಕಷ್ಟಿದೆ,” ಎಂದು ಕಮಿನ್ಸ್ ತಿಳಿಸಿದರು.

ಈ ಸೋಲಿನ ಹೊರತಾಗಿಯೂ ಪ್ಯಾಟ್ ಕಮಿನ್ಸ್ ಪ್ಲೇಆಫ್ ತಲುಪುವ ಬಗ್ಗೆ ಭಾರೀ ವಿಶ್ವಾಸ ವ್ಯಕ್ತಪಡಿಸಿದ್ದಾರೆ. “ನಮ್ಮ ಅಗ್ರ ಕ್ರಮಾಂಕದ ಬ್ಯಾಟರ್‌ಗಳು ಅದ್ಭುತ ಫಾರ್ಮ್‌ನಲ್ಲಿದ್ದಾರೆ. ಮೊದಲ ನಾಲ್ವರು ಬ್ಯಾಟರ್‌ಗಳು ಈಗಾಗಲೇ ತಲಾ 400ಕ್ಕೂ ಹೆಚ್ಚು ರನ್ ಗಳಿಸಿರುವುದು ತಂಡದ ಬಲವನ್ನು ತೋರಿಸುತ್ತದೆ. ಕಳೆದ ಏಳು ಪಂದ್ಯಗಳಲ್ಲಿ ನಾವು ಉತ್ತಮವಾಗಿ ಆಡಿದ್ದೇವೆ, ಹಾಗಾಗಿ ಈ ಒಂದು ಸೋಲಿನ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ,” ಎಂದರು.

ಮುಂದಿನ ಎರಡು ಪಂದ್ಯಗಳು ಹೈದರಾಬಾದ್‌ಗೆ ಮಹತ್ವದ್ದಾಗಿದ್ದು, ನಮಗೆ ಚಿರಪರಿಚಿತವಿರುವ ಕ್ರೀಡಾಂಗಣಗಳಲ್ಲಿ ಪಂದ್ಯಗಳು ನಡೆಯಲಿವೆ. ಹಳೆಯ ಗೆಲುವಿನ ಲಯಕ್ಕೆ ಮರಳಿ ಪ್ಲೇಆಫ್ ಸ್ಥಾನವನ್ನು ಖಚಿತಪಡಿಸಿಕೊಳ್ಳುತ್ತೇವೆ ಎಂದು ಕಮಿನ್ಸ್ ವಿಶ್ವಾಸದ ನುಡಿಗಳನ್ನಾಡಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !